ಕಾನೂನು ಎಲ್ಲರಿಗೂ ಸಮಾನವಾಗಿದೆ. ಅದು ಮಹಿಳೆಯರೇ ಇರಲಿ, ಪುರುಷರೇ ಇರಲಿ ನಾವು ಯಾವುದೇ ಹಕ್ಕು ಸೌಲಭ್ಯ ಪಡೆಯಬೇಕಾದರೆ ಕಾನೂನು ಅಡಿಯಲ್ಲಿ ಸಮಾನತೆ ನ್ಯಾಯ ಪಡೆಯಬೇಕು ಎಂದು ಫಾದರ್ ಸುಮನ್ ಬಾಲು ಹೇಳಿದರು.
ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ಸಂತ ಜೋಸೆಫ್ ಆರೋಗ್ಯ ಮತ್ತು ಸಮುದಾಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಎಚ್‌ಐವಿ ಭಾದಿತರ ಬೆಂಬಲ ಸಭೆಯಲ್ಲಿ ಸಂವಿಧಾನ ಪ್ರಸ್ತಾವನೆ ಪ್ರತಿಜ್ಞೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಮುಖ್ಯವಾಗಿ ಎಲ್ಲ ರಂಗಗಳಲ್ಲೂ ನಮಗೆ ಸಮಾನವಾದ ಅವಕಾಶಗಳು ಬೇಕೇ ಹೊರತು ಅನುಕಂಪವಲ್ಲ. ಅದಕ್ಕೆ ನಾವು ಸಮಾನ ನ್ಯಾಯ ಕಾನೂನುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಕೆಲವು ಸಮಯಗಳಲ್ಲಿ ಆಸ್ತಿ ವಿಚಾರ ಬಂದಾಗ ನೀವು ಎಚ್‌ಐವಿ ಭಾದಿತರು, ನಿಮಗೆ ಆಸ್ತಿ ಯಾಕೆ ಕೋಡಬೇಕೆಂದು ಮನೆಯಿಂದ ಹೊರಗೆ ಹಾಕಿರುವ ಉದಾಹರಣೆಗಳು ನಮ್ಮ ಮುಂದಿವೆ. ಅದಕ್ಕೆ ನಾವು ಹೇಗೆ ಇರಲಿ ನಮಗೂ ಎಲ್ಲರ ಹಾಗೆ ಸಮಾನವಾದ ನ್ಯಾಯ ಮತ್ತು ಹಕ್ಕುಗಳಿವೆ. ಅದು ನಮ್ಮ ಕಾನೂನಿನಲ್ಲಿದೆ. ಇಂತಹ ಸಮಯದಲ್ಲಿ ಕೆಲವು ಬಾರಿ ನಾವು ನ್ಯಾಯಾಲಯಕ್ಕೆ ಹೋಗುವ ಅನಿವಾರ್ಯತೆಯೂ ಬರಬಹುದು” ಎಂದು ಹೇಳಿದರು.
“ಕಾನೂನುಗಳಿಗೆ ಸಂಬಂಧಿಸಿದಂತೆ ಸಲಹೆ, ಮಾರ್ಗದರ್ಶನ, ಸಹಾಯ, ಸಹಕಾರ ಬೇಕಾದಾಗ ವೈಯಕ್ತಿಕವಾಗಿ ಭೇಟಿಯಾಗಿ ಸಹಾಯ ಪಡೆಯಬಹುದು ಹಾಗೂ ಎಲ್ಲ ವಿಚಾರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ‘ಟೋಲ್’ ಶನಿಯಿಂದ ಮುಕ್ತಿ ನೀಡಲು ಒಂದಾದ ಸಾಸ್ತಾನದ ನಾಗರಿಕರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಸ್ಟರ್ ಅಮಲಾ ರಾಣಿ ಮಾತನಾಡಿ, “ಸಮಾಜದಲ್ಲಿ ನಾವು ಎಲ್ಲರ ಹಾಗೆ ಸಮಾನರಾಗಿ ಗೌರವದಿಂದ ಬದುಕುವ ಹಕ್ಕು ಕಾನೂನಿನಲ್ಲಿದೆ. ನಮಗೂ ಸಮಾನವಾದ ನ್ಯಾಯ ಪಡೆಯುವ ಹಕ್ಕಿದೆ. ಅದಕ್ಕೆ ನಾವು ಎಚ್‌ಐವಿ ಬಾಧಿತರು ನಮ್ಮನ್ನು ಎಲ್ಲರೂ ತಾರತಮ್ಯದಿಂದ ನೋಡುತ್ತಾರೆಂಬ ಭಾವನೆಯನ್ನು ನಮ್ಮ ತಲೆಯಿಂದ ತೆಗೆಯಬೇಕು. ನಮ್ಮಲ್ಲಿರುವ ಹಿಂಜರಿಕೆ ಭಯ ತೊರೆದು ಸಮಾಜದಲ್ಲಿ ಘನತೆ ಗೌರವದ ಬದುಕು ಬದಕಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 60ಕ್ಕಿಂತ ಹೆಚ್ಚು ಮಂದಿ ಎಚ್‌ಐವಿ ಬಾಧಿತರು ಭಾಗಿಯಾಗಿದ್ದರು.