ವಿಜಯಪುರ ಜಿಲ್ಲೆಯ ಕೃಷಿಯಲ್ಲಿರುವ ಸಮಸ್ಯೆಗಳಿಗೆ ಸೂಕ್ತ ವೈಜ್ಞಾನಿಕ ಪರಿಹಾರಗಳನ್ನು ಸ್ಥಳೀಯವಾಗಿ ನೀಡುವಂತೆ ಕೃಷಿ ವಿಜ್ಞಾನ ಕೇಂದ್ರಗಳು, ಪ್ರಗತಿಪರ ರೈತರು, ಇತರೆ ಇಲಾಖೆಗಳ ಸಹಯೋಗದಲ್ಲಿ ನಿರ್ಣಯ ತೆಗೆದುಕೊಳ್ಳುವುದು ಅತಿ ಅವಶ್ಯಕವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ ಎಲ್ ಪಾಟೀಲ ತಿಳಿಸಿದರು.
ನಗರದ ಹೊರವಲಯದ ಹಿಟ್ಟಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಮತ್ತು ಇಂಡಿ ಕೃಷಿ ವಿಜ್ಞಾನ ಕೇಂದ್ರಗಳ 26ನೇ ಮತ್ತು 6ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ರೈತರ ಸುಸ್ಥಿರ ಬದುಕು ಮತ್ತು ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜತೆಗೆ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ಶ್ರಮಿಸಬೇಕು” ಎಂದು ಹೇಳಿದರು.
“ಪ್ರಸ್ತುತ ದಿನಗಳಲ್ಲಿ ಯುವಜನರು ಕೃಷಿಯಿಂದ ವಿಮುಖರಾಗುತ್ತಿದ್ದು, ʼಯುವಜನರರ ನಡಿಗೆ ಕೃಷಿಯ ಕಡೆಗೆʼ ಎಂಬ ತತ್ವವನ್ನು ಆಳವಡಿಸಿ ಹೆಸರಾಂತ ಸ್ವಾಮೀಜಿಗಳಿಂದ ಕೃಷಿ ದೀಕ್ಷೆ ನೀಡಿ ಅವರು ಕೃಷಿಯತ್ತ ಆಸಕ್ತಿ ವಹಿಸುವಂತೆ ಕ್ರಮ ಕೈಗೊಳ್ಳಬೇಕು” ಎಂದರು.
“ವಿಜಯಪುರದಲ್ಲಿ ಬೆಳೆಯುವ ವಿವಿಧ ಬೆಳೆಗಳಾದ ತೊಗರಿ, ಅಜ್ವಾನ, ಕಬ್ಬು, ದಾಳಿಂಬೆ ಇತ್ಯಾದಿ ಬೆಳೆಗಳಲ್ಲಿ ಬರುವ ಸಮಸ್ಯೆಗಳಾದ ಹೊಸ ತಳಿಗಳ ಬಗ್ಗೆ ಮಾಹಿತಿ ಕೊರತೆ, ಬೇಸಾಯಕ್ರಮ ಮತ್ತು ಕೀಟ ಸಮಸ್ಯೆ, ರೋಗ ಹತೋಟಿ ಕ್ರಮಗಳ ಬಗ್ಗೆ ತರಬೇತಿಗಳ ಮೂಲಕ ರೈತರಿಗೆ ಸಹಾಯ ಮಾಡಬೇಕು. ಸಮಸ್ಯೆಗಳ ಕುರಿತು ರೈತರು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಎಲ್ಲ ಬೆಳೆಗಳ ಮೌಲ್ಯವರ್ಧನೆ, ಮಾರುಕಟ್ಟೆ ಬಗ್ಗೆ ಹೆಚ್ಚಿನ ಗಮನಹರಿಸಿ” ಎಂದು ರೈತರಿಗೆ ಸಲಹೆ ನೀಡಿದರು.
ಸಂಶೋಧನಾ ನಿರ್ದೇಶಕ ಡಾ. ಬಿ ಡಿ ಬಿರಾದಾರ ಮಾತನಾಡಿ, “ರೈತರು ತಮ್ಮ ಜಮೀನಿನ ಬದುಗಳಲ್ಲಿ ಬಹುವಾರ್ಷಿಕ ಮೇವಿನ ಗಿಡಗಳನ್ನು ಬೆಳೆಯಬೇಕು. ರೈತರು ಹೆಚ್ಚಿನ ಪ್ರಮಾಣದಲ್ಲಿ ಕೀಟ/ರೋಗನಾಶಕಗಳ ಸಿಂಪಡಣೆಯಿಂದ ನೈಸರ್ಗಿಕ ಕೀಟಗಳು ಹಾಳಾಗಿದ್ದು, ಇವುಗಳ ತಡೆಗೆ ಪರತಂತ್ರ ಜೀವಿಗಳನ್ನು ಅಭಿವೃದ್ಧಿಪಡಿಸಿ ಹಾನಿಕಾರಕಗಳನ್ನು ಹತೋಟಿಯಲ್ಲಿಡಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕಿ ಡಾ. ರೂಪಾ ಎಲ್ ಮಾತನಾಡಿದರು ಹಾಗೂ ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಆರ್ ಬಸದರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಕ್ತಿನಗರ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಬಳಿ ನಿರ್ಮಾಣವಾಗುವುದೇ ಇಂದಿರಾ ಕ್ಯಾಂಟಿನ್?
ವಿಜಯಪುರ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಎಸ್ ಎಮ್ ವಸ್ತ್ರದ ಹಾಗೂ ಇಂಡಿಯ ಹಿರಿಯ ವಿಜ್ಞಾನಿ ಡಾ. ಶಿವಶಂಕರಮೂರ್ತಿ, ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಪ್ರಗತಿಯ ಕುರಿತು ಸಂಕ್ಷಿಪ್ತ ವರದಿ ಮಂಡಿಸಿದರು.
ಸಭೆಯಲ್ಲಿ ಕೃಷಿ ಮಹಾವಿದ್ಯಾಲಯ ಡೀನ್ ಡಾ. ಎ ಎಸ್ ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್ ಬಿ ಬೆಳ್ಳಿ, ಸಹ ಸಂಶೋಧನಾ ನಿರ್ದೇಶಕ ಡಾ. ಎಸ್ ಬಿ ಜಗ್ಗಿನವರ, ಕೃಷಿ ವಿಜ್ಞಾನ ಕೇಂದ್ರ ವಿಜಯಪುರ ಹಾಗೂ ಇಂಡಿಯ ಎಲ್ಲ ವಿಜ್ಞಾನಿಗಳು, ಪ್ರಗತಿಪರ ರೈತರಾದ ಸಿದ್ದಪ್ಪ ಬಾಲಗೊಂಡ, ಚಂದ್ರಶೇಖರ ರೆಡ್ಡಿ, ನಿಂಗನಗೌಡ ಪಾಟೀಲ, ಸಿದ್ದು ಕವಡೆಕರ, ಭೀಮನಗೌಡ ಪಾಟೀಲ, ಅಂಕಿತ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರು, ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಇದ್ದರು.