ವಿಜಯಪುರ ಜಿಲ್ಲೆಯ ರೈತರಿಗೆ ಗುಣಮಟ್ಟ ಹಾಗೂ ಸಮರ್ಪಕ ವಿದ್ಯುತ್ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರದ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರ ಸಿದ್ದಣ್ಣ ಬೆಂಜಿಗೇರಿ ಮೂಲಕ ಹುಬ್ಬಳ್ಳಿಯ ಹೆಸ್ಕಾಂ ಎಂಡಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ಬಿರುಬಿಸಿಲಿನ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಒಂದೆಡೆ ನೀರಿನ ಸಮಸ್ಯೆಯಾದರೆ, ಈಗ ವಿದ್ಯುತ್ ಇಲಾಖೆಯ ಕಣ್ಣಾಮುಚ್ಚಾಲೆ ಹಾಗೂ ಕಳಪೆಮಟ್ಟದ ವಿದ್ಯುತ್ ವಿತರಣೆಯಿಂದಾಗಿ ಅಡಚಣೆ ಉಂಟಾಗುತ್ತಿದೆ. ಅವಶ್ಯಕತೆ ಇರುವ ರೈತರು ಕೃಷಿ ಪಂಪ್‌ಸೆಟ್‌ಗಳನ್ನು ಪ್ರಾರಂಭಿಸುವಂತೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
“ರೈತರ ಐಪಿಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ, ಸ್ವಯಂ ವೆಚ್ಚ ಯೋಜನೆ ಜಾರಿಮಾಡುತ್ತಿರುವುದು ತೀರಾ ಖಂಡನೀಯ. ಒಬ್ಬ ಸಣ್ಣ ರೈತ ಐಪಿಸೆಟ್‌ಗಾಗಿ ₹3 ಲಕ್ಷದಿಂದ ₹4 ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರದ ಇದರ ಹಿಂದಿನ ಉದ್ದೇಶವೇ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದೆ. ಇದನ್ನು ಕೂಡಲೇ ಕೈಬಿಡಬೇಕು. ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ರೈತರು ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಸ್ತೆ ತಡೆ ನಡೆಸಿ ರೈತರ ಜಮೀನಿಗೆ ರಾತ್ರಿ ಗೃಹಬಳಕೆ ವಿದ್ಯುತ್ ಪೂರೈಸಿ: ರೈತ ಸಂಘ
ಕೋಲಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ, ವಿಜಯಪುರ ತಾಲೂಕು ಅಧ್ಯಕ್ಷ ಮಹಾದೇವಪ್ಪ ತೇಲಿ, ಮುಖಂಡ ಹನಮೇಶ ಜಮಖಂಡಿ, ರಾಮಸಿಂಗ ರಜಪೂತ, ಸಿದ್ದನಗೌಡ ಪಾಟೀಲ, ರಾಜೇಶ್ ನದಾಫ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ತಾಳಿಕೋಟಿ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಬಬಲೇಶ್ವರ ಅಧ್ಯಕ್ಷ ಮಕಬುಲ ಕೀಜಿ ಇಂಡಿ, ಅಧ್ಯಕ್ಷ ಎಂ ಹೆಚ್ ಪೂಜಾರಿ, ರಾಮಚಂದ್ರ ಪಾಟೀಲ, ರಾಮಚಂದ್ರ ಬಡಿಗೇರ, ಸಂಗಪ್ಪಟಕ್ಕೆ, ಬಸವರಾಜ ನ್ಯಾಮಗೊಂಡ, ಸಂಪತ್ತ ಜಮಾದಾರ, ಶಾನೂರ ನಂದರಗಿ, ನಜೀರ ನಂದರಗಿ, ಚನ್ನು ಜಮಖಂಡಿ, ಬಸವರಾಜ ಮಸೂತಿ, ಕಲ್ಲಪ್ಪ ಪಾರಶೆಟ್ಟಿ, ಮಹಾಂತೇಶ ಮಮದಾಪುರ, ಘೋಡೆಕಾರ ಇದ್ದರು.
