ಶಾಲೆಯ ಪೂರ್ಣ ಶುಲ್ಕ (ಡೊನೇಷನ್) ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡದೆ, ಪರೀಕ್ಷೆ ನಡೆಯುತ್ತಿದ್ದ ಕೊಠಡಿಯಿಂದ ಕೆಲ ವಿದ್ಯಾರ್ಥಿಗಳನ್ನು ಶಿಕ್ಷಕರು ಹೊರಹಾಕಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆ ಡಿ.ವಿ ದರಬಾರ್ ಮೆಮೋರಿಯಲ್ ಟ್ರಸ್ಟ್‌ನ ಶಮ್ಸ್ ಶಾಲೆಯಲ್ಲಿ ಘಟನೆ ನಡೆದಿದೆ. ಎರಡನೇ ಸೆಮಿಸ್ಟರ್ನ ಶಾಲಾ ಬೋಧನಾ ಶುಲ್ಕ ಭರಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಯುನಿಟ್ ಕಿರುಪರೀಕ್ಷೆ ಬರೆಯಲು ಅವಕಾಶ ಕೊಡದೆ, ಅವರನ್ನು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಮನೆಗೆ ಕಳಿಸಿದ್ದಾರೆ. 1 ರಿಂದ 6ನೇ ತರಗತಿಯ ಹಲವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ಮನೆಗೆ ಬಂದಿದ್ದು, ಶಾಲೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಯಿಂದ ವಂಚತರಾದ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಧಾವಿಸಿದ್ದು, ಶಿಕ್ಷಕರನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಪರೀಕ್ಷಾ ಕೊಠಡಿಯಿಂದ ತಮ್ಮ ಮಕ್ಕಳನ್ನು ಹೊರಹಾಕಲಾಗಿದೆ. ಇದು, ಮಕ್ಕಳ ಮನಸ್ಸಿನ ಗಂಭೀರ ಪರಿಣಾಮ ಬೀರುತ್ತದೆ. 2/3 ಸಾವಿರ ರೂಪಾಯಿ ಕಾರಣಕ್ಕೆ ಮಕ್ಕಳನ್ನು ಹೊರಹಾಕಬೇಕಿತ್ತೇ ಎಂದು ಕಿಡಿಕಾರಿದ್ದಾರೆ.
ಕೆಲ ಪೋಷಕರು ತಾವು ಪೂರ್ಣ ಶುಲ್ಕ ಭರಿಸಿದ್ದರೂ, ಮಕ್ಕಳನ್ನು ಪರೀಕ್ಷೆಯಿಂದ ಹೊರ ಕಳಿಸಲಾಗಿದೆ ಎಂದು ಶಿಕ್ಷಕರು ವಿರುದ್ಧ ಹರಿಹಾಯ್ದಿದ್ದಾರೆ. ಆದಾಗ್ಯೂ, “ಮಕ್ಕಳನ್ನು ಪರೀಕ್ಷೆಯಿಂದ ಹೊರಗೆ ಕಳಿಸಿರುವ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಮೇಲಾಧಿಕಾರಿಗಳಿಗೆ ದೂರು ಕೊಡಿ, ನಾವು ಏನೂ ಮಾಡಲಾಗುವುದಿಲ್ಲ” ಎಂಬ ಉಢಾಫೆಯ ಉತ್ತರವನ್ನು ಶಾಲೆಯ ಆಡಳಿತ ಮಂಡಳಿ ನೀಡಿದೆ ಎಂದು ಆರೋಪಿಸಲಾಗಿದೆ.