ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿದ್ದು, ನಿಗದಿತ ಸಮಯಕ್ಕೆ ಕೆಲಸ ಮುಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೂಡಲೇ ತಂತ್ರಾಂಶದ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಸರಾಗವಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಅಂಗನವಾಡಿ ನೌಕರರ ಸಂಘವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಜಯಪುರ ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿತು.
“ಅಂಗನವಾಡಿಗಳಲ್ಲಿ ಮಾಡುವ ಪ್ರತಿ ಕೆಲಸವನ್ನು ಫೋನ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಗರ್ಭಿಣಿ, ಬಾಣಂತಿಯರು, ಮಕ್ಕಳು, ಕಿಶೋರಿಯರು ಸೇರಿದಂತೆ ಫಲಾನುಭವಿಗಳ ಮಾಹಿತಿಯನ್ನು ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಈ ವೇಳೆ ಒಂದು ಫೋಟೋ ಅಳವಡಿಸಲು ಸುಮಾರು 30 ನಿಮಿಷ ಸಮಯ ಹಿಡಿಯುತ್ತಿದೆ. ಅದರ ಜತೆಗೆ ಸರ್ವರ್ ಸಮಸ್ಯೆಯೂ ಹೆಚ್ಚಾಗಿದೆ.
ಬಹುತೇಕರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವುದರಿಂದ ನೆಟ್‌ವರ್ಕ್ ಸಹ ಸರಿಯಾಗಿ ಸಿಗದೆ ಒಂದು ಸಣ್ಣ ಕೆಲಸವನ್ನು ಮಾಡಲು ಇಡೀ ದಿನ ತೆಗೆದುಕೊಳ್ಳುವ ಪರಿಸ್ಥಿತಿ ಇದೆ. ಈ ರೀತಿಯ ಸಮಸ್ಯೆ ನೋಡಿ ಫಲಾನುಭವಿಗಳೂ ಕೂಡ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೂ ಇಲಾಖೆಯಿಂದ ಒತ್ತಡ ಮಾತ್ರ ತಪ್ಪಿಲ್ಲ. ಈ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಕ್ರಮಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
“ಕೆಲಸದ ಬಗ್ಗೆ ತಿಳಿಸಿಕೊಡುವ ತರಬೇತಿ ಕೂಡ ಇಲಾಖೆ ಮಾಡಿರುವುದಿಲ್ಲ. ಸಮಸ್ಯೆ ಬಗ್ಗೆ ಅಧಿಕಾರಿಗಳ ಬಳಿ ಚರ್ಚಿಸಿದರೆ, ಸಮರ್ಪಕ ಉತ್ತರ ನೀಡದೇ ಯೂಟ್ಯೂಬ್ ಮೂಲಕ ಕಲಿಯರಿ ಎಂದು ಹಾರಿಕೆಯ ಉತ್ತರ ನಿಡುತ್ತಾರೆ. ಅದರ ಸಲುವಾಗಿ ಒಬ್ಬೊಬ್ಬ ಫಲಾನುಭವಿಯ ಮನೆ ಮುಂದೆಯೂ ಕನಿಷ್ಟ ಅರ್ಧ ತಾಸು ನಿಲ್ಲಬೇಕಾಗುತ್ತದೆ. ಹಿಗಾದರೆ ಶಾಲಾ ಪೂರ್ವ ಶಿಕ್ಷಣ ಕುಂಠಿತವಾಗತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಇಂಗಳೇಶ್ವರ ಮಠದ ಚನ್ನಬಸವ ಶ್ರೀಗೆ ಗೌರವ ಸಮರ್ಪಣೆ
ಈ ವೇಳೆ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ವಿಜಯಪುರ ಜಿಲ್ಲಾ ಸಮಿತಿ ಮುಖಂಡ ಮಲ್ಲಿಕಾರ್ಜುನ ಹೆಚ್ ಟಿ .ನೇತ್ರತ್ವದಲ್ಲಿ ನಿಂಗಮ್ಮ ಮಠ, ಲಕ್ಷ್ಮೀ ಲಕ್ಷಟ್ಟಿ, ಗಾಯತ್ರಿ ಜಡಿಮಠ, ತಾಲೂಕಿನ ಮುಖಂಡರಾದ ಸವಿತಾ ತೇರದಾಳ, ಚಡಚಣ ತಾಲೂಕಿನಿಂದ ಸತ್ಯಮ ಹಡಪದ ಹಾಗೂ ಗಂಗಾ ಉಪಸ್ಥಿತಿರಿದ್ದರು.
