ಜಾತಿಗಣತಿ ವರದಿಯನ್ನು ಸಂಪುಟ ಸಮಿತಿ ಮುಂದಿರಿಸಿ ಆದಷ್ಟು ಬೇಗ ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲಿ ರಾಜ್ಯಾದ್ಯಂತ ಆಂದೋಲನ ಆರಂಭಿಸಲಾಗುವುದು ಎಂದು ಕಾಂಗ್ರೆಸ್ ಮಾಜಿ ಶಾಸಕ ರಾಜು ಆಲಗೂರ ಆಗ್ರಹಿಸಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ರಾಜ್ಯದಲ್ಲಿರುವ ಎಲ್ಲ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಅರಿಯಲು ಹಿಂದಿನ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ನಡೆಸಿತ್ತು. ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಜಾತಿಗಣತಿ ವರದಿ ಬಿಡುಗಡೆಯಾಗಲಿಲ್ಲ. ಇದೀಗ ನಮ್ಮದೇ ಸರ್ಕಾರವಿದ್ದು, ತ್ವರಿತವಾಗಿ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
“ಬೆರಳೆಣಿಕೆ ಸಮುದಾಯಗಳು ಎಲ್ಲ ರೀತಿಯ ಅನುಕೂಲತೆ ಪಡೆದಿವೆ. ಬಹುಸಂಖ್ಯಾತ ಹಿಂದುಳಿದ, ಅಲ್ಪಸಂಖ್ಯಾತ ಜನರಿಗೆ ಬಹಳ ಕಡಿಮೆ ಅವಕಾಶಗಳು ಸಿಕ್ಕಿವೆ. ಹಾಗಾಗಿ ಮಂಡನೆಯಾಗಿರುವ ವರದಿಯನ್ನು ಈಗಲಾದರೂ ಬೇಗ ಅನುಷ್ಟಾನಗೊಳಿಸಬೇಕು” ಎಂದು ಆಗ್ರಹಿಸಿದರು.
“ಎಲ್ಲೋ ಒಂದು ಕಡೆ ಸಿದ್ದರಾಮಯ್ಯನಂಥವರು ಅವಕಾಶ ಪಡೆದಿರಬಹುದು. ಆದರೆ ಇನ್ನುಳಿದವರಿಗೆ ಆ ಅವಕಾಶ ಸಿಕ್ಕಿಲ್ಲ. ಆ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳು ಸಿಗಬೇಕಿದೆ. ಈ ಕೂಗು ಎಲ್ಲ ಪ್ರಗತಿಪರ ಸಂಘಟನೆಗಳಿಂದ ಕೇಳಿಬಂದಿದೆ. ಹೀಗಾಗಿ ಆದಷ್ಟು ಬೇಗ ವರದಿ ಅನುಷ್ಠಾನಕ್ಕೆ ಬರಲಿದೆಯೆಂದು ಸಿದ್ದರಾಮಯ್ಯನವರ ಮೇಲೆ ನಂಬಿಕೆ ಮತ್ತು ಭರವಸೆಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಜಾತಿಗಣತಿ ಬಿಡುಗಡೆ ಮಾಡಬಾರದೆಂದು ಅನೇಕರು ವಿರೋಧ ಮಾಡುತ್ತಿದ್ದಾರೆ. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸಮುದಾಯಗಳ ಸಮೀಕ್ಷೆಯಾಗಿದೆ. ಆ ಬಗ್ಗೆಯೂ ಈ ವರದಿಯಲ್ಲಿದೆಯೆಂದು ಭಾವಿಸಿದ್ದೇನೆ. ಬಿಡುಗಡೆಯಾದರೆ ಆ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಮಹರ್ಷಿ ವಾಲ್ಮೀಕಿ ಜಯಂತಿ
ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, “ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಾತಿಗಣತಿಯ ಅವಶ್ಯಕತೆಯಿದೆ. ಅನೇಕ ಜಾತಿಗಳು ರಾಜಕೀಯವಾಗಿ ಗುರುತಿಸಿಕೊಳ್ಳಲಾಗಿಲ್ಲ. ಹೀಗಾಗಿ ಸರ್ವರಿಗೂ ಅವಕಾಶ ಸಿಗಬೇಕಾದರೆ ಜಾತಿಗಣತಿ ವರದಿ ಬಿಡುಗಡೆಯಾಗಬೇಕು. ಸಿಎಂ ಸಿದ್ದರಾಮಯ್ಯನವರು ಯಾವುದೇ ಒತ್ತಡಕ್ಕೆ ಮಣಿಯದೆ ವರದಿ ಜಾರಿಗೆ ತರುವ ವಿಶ್ವಾಸವಿದೆ. ಆಕಸ್ಮಿಕವಾಗಿ ಚರ್ಚೆಯಾಗದೇ ಹೋದರೆ ರಾಜ್ಯದಲ್ಲಿ ಆಂದೋಲನ ಆರಂಭಗೊಳ್ಳಲಿದೆ” ಎಂದು ಎಚ್ಚರಿಕೆ ನೀಡಿದರು.
ಡಾ ಗಂಗಾಧರ ಸಂಬಣ್ಣಿ, ಸುರೇಶ ಪೊಣಸಗಿ, ಚಂದ್ರಶೇಖರ ಕೊಡಬಾಗಿ, ಮಹ್ಮದ್ ರಫೀಲ್ ಟಪಾಲ್, ಸಾಹೇಬಗೌಡ ಬಿರಾದಾರ, ಕೃಷ್ಣಾ ಅಣಚಿ, ವಸಂತ ಹೊನಮೊಡೆ ಸೇರಿದಂತೆ ಇತರರು ಇದ್ದರು.