ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಶಾಲಾ ಮಕ್ಕಳು ಹೈರಾಣಾಗಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಶುದ್ಧ ನೀರಿಲ್ಲ, ಶೌಚಾಲಯದ ವ್ಯವಸ್ಥೆಯೂ ಸರಿಯಿಲ್ಲ. ಕೊಠಡಿಗಳ ಕೊರತೆಯಿದ್ದು, ವಿದ್ಯಾರ್ಥಿಗಳಿಗೆ ಬಯಲಲ್ಲೇ ಪಾಠ ಮಾಡುತ್ತಿದ್ದಾರೆ ಶಿಕ್ಷಕರು.
ಕನಿಷ್ಠ ಮೂಲಸೌಲಭ್ಯವೂ ಇಲ್ಲದ ಈ ಶಾಲೆಯಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರಿ ಪ್ರೌಢಶಾಲೆಯಲ್ಲಿ 148 ಬಾಲಕರು ಮತ್ತು 221 ಬಾಲಕಿಯರು ಸೇರಿ, ಒಟ್ಟು 369 ವಿದ್ಯಾರ್ಥಿಗಳಿದ್ದಾರೆ. ಶಾಲೆಯಲ್ಲಿ ಒಟ್ಟು ಶಿಕ್ಷಕರು ಸೇರಿ 13 ಸಿಬ್ಬಂದಿ ಇದ್ದಾರೆ. ಶಾಲೆಯಲ್ಲಿ ಐದು ಕೊಠಡಿಗಳಿದ್ದು, ಇನ್ನೂ ಆರು ಕೊಠಡಿಗಳ ಅವಶ್ಯಕತೆ ಇದೆ.
ಶಾಲೆಯ ಬಳಿಯೇ ಬಸ್ ನಿಲ್ದಾಣದ ಶೌಚಾಲಯ ಇದ್ದು, ಅಲ್ಲಿಂದ ದುರ್ವಾಸನೆ ಬರುತ್ತದೆ. ಇದರಿಂದ ಮಕ್ಕಳು ಕೊಠಡಿಯಲ್ಲಿ ಕೂರಲು ಆಗುತ್ತಿಲ್ಲ. ಅಲ್ಲದೇ, ಕೊಠಡಿಗಳ ಕೊರತೆಯೂ ಇರುವ ಕಾರಣ ಶಿಕ್ಷಕರು ನಮಗೆ ಬಯಲಲ್ಲಿ ಕೂರಿಸಿ ಪಾಠ ಮಾಡುತ್ತಾರೆ. ಬಸ್ ನಿಲ್ದಾಣದಲ್ಲಿನ ಶೌಚಾಲಯದ ಸಮಸ್ಯೆ ನಿವಾರಿಸಿ ಎಂದು ಹೇಳಿದರೂ ಯಾರೂ ಸ್ಪಂದಿಸುತ್ತಿಲ್ಲಾ ಎನ್ನುತ್ತಾರೆ ವಿದ್ಯಾರ್ಥಿಗಳು.
ಶಾಲೆಯಲ್ಲಿ ಶುದ್ಧ ಕುಡಿವ ನೀರಿನ ಘಟಕ ಇಲ್ಲ. ನಾಲ್ಕು ದಿನಕ್ಕೊಮ್ಮೆ ಬರುವ ನಲ್ಲಿ ನೀರನ್ನು ಶಾಲೆಯಲ್ಲಿನ ದೊಡ್ಡ ನೀರಿನ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಟ್ಯಾಂಕ್ ಸ್ವಚ್ಛ ಇರುವುದಿಲ್ಲ. ಅದಕ್ಕೆ ಮುಖ್ಯರಸ್ತೆಯಲ್ಲಿರುವ ಚಹಾ ಅಂಗಡಿ, ಹೋಟೆಲ್‌ಗಳಲ್ಲಿ ನೀರು ಕುಡಿಯುತ್ತೇವೆ ಎಂದು ಬೇಸರ ಹೊರಹಾಕುತ್ತಾರೆ ಮಕ್ಕಳು.
ಶಾಲೆಯ ಮೂಲೆಯಲ್ಲಿರುವ ಕಿರುಕೊಠಡಿಯಲ್ಲಿ ಬಾಲಕಿಯರು ಮೂತ್ರ ವಿಸರ್ಜನೆಗೆ ಹೋಗುತ್ತಾರೆ. ಬಾಲಕರು ಶಾಲೆಯ ಹೊರಗಡೆ ಹೋಗಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಮುಖ್ಯರಸ್ತೆ ಇರುವ ಕಾರಣ ವಿದ್ಯಾರ್ಥಿಗಳು ಅಪಘಾತಕ್ಕೀಡಾಗುವ ಸಾಧ್ಯತೆಯೂ ಇರುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ತ್ವರಿತವಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದೇವೆ. ಶಾಸಕರಿಗೂ ಮನವಿ ಪತ್ರ ಕೊಟ್ಟಿದ್ದು ಭರವಸೆ ಸಿಕ್ಕಿದೆ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಎಂ.ಎಸ್. ಕವಡಿಮಟ್ಟಿ.
ಒಟ್ಟಿನಲ್ಲಿ ಸರ್ಕಾರಿ ಶಾಲೆಯೊಂದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದೆ. ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂಬುದು ಶಾಲಾ ಮಕ್ಕಳು ಆಗ್ರಹ.