ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಜೀವನ ಕಟ್ಟಿಕೊಂಡಿದ್ದು, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಆದರೆ, ಈಗ ಅಳಿವಿನಂಚಿನಲ್ಲಿರುವ ಈ ಶಾಲೆಗೆ ಸಹಾಯದ ಹಸ್ತ ಬೇಕಿದೆ ಮತ್ತು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
1862ರ ಡಿಸೆಂಬರ್ 28ರಂದು ಮಾದರಿ ಶಾಲೆಯಾಗಿ ಪರಿವರ್ತನೆಯಾಗಿರುವ ಈ ಶಾಲೆಯ ಮೂರು ಕೊಠಡಿಗಳು ಕಟ್ಟಡ ಮೇಲ್ಛಾವಣಿ ಇಲ್ಲದೆ ಅವಸಾನದಂಚಿಗೆ ತಲುಪಿವೆ.

ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣ ತುಂಬಾ ವೇಗವಾಗಿ ಬೆಳೆಯುತ್ತಿದೆ. ಗ್ರಾಮದ ಹೊರವಲಯದಲ್ಲಿದ್ದ ಈ ಶಾಲೆ ಈಗ ಪಟ್ಟಣದ ಮದ್ಯಭಾಗವಾಗಿದೆ. ಇಲ್ಲಿ ಸೌಲಭ್ಯಗಳಿಗೇನೂ ಬರವಿಲ್ಲ. ಸದ್ಯ ಒಂದರಿಂದ ಏಳನೇ ತರಗತಿವರೆಗೆ ಒಟ್ಟು 134 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 6 ಮಂದಿ ಶಿಕ್ಷಕರು ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. 15 ಕೊಠಡಿಗಳಿವೆ. 8 ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿದ್ದರೆ ಉಳಿದ 3ರಲ್ಲಿ ತಾಪಂ ಕಚೇರಿ, ಒಂದು ಗ್ರಂಥಾಲಯ, ಒಂದು ತಾಲೂಕು ಆಡಳಿತ ಕಚೇರಿಗೆ ಕೊಠಡಿಗಳು ಬಳಕೆಯಾಗುತ್ತಿವೆ.

ಸಾವಿರ ಕಥೆಗಳಿವೆ: ಕಮಿಷನ್ ನಗರಾಡಳಿತ, ಮೈಸೂರು ಮಹಾರಾಜರ ಆಡಳಿತ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯೋತ್ತರ ಘಟನೆಗಳಿಗೆ ಸಾಕ್ಷಿಯಾಗುತ್ತ ತನ್ನ ಮಡಿಲಲ್ಲಿ ಮಕ್ಕಳನ್ನು ಕೂರಿಸಿಕೊಂಡು ಅಕ್ಷರ ಸೇವೆ ನಡೆಸುತ್ತ ಬಂದಿದ್ದ ಈ ಶಾಲೆಯ ಕುರಿತು ಸಾವಿರ ಕಥೆಗಳಿವೆ. ಶಿಸ್ತು, ಕರ್ತವ್ಯ ನಿಷ್ಠೆ, ಶಿಕ್ಷಣ ಪ್ರೇಮ, ಮಾನವೀಯ ಮೌಲ್ಯಗಳಿಗೆ ಹೆಸರಾದ ಅತ್ಯುತ್ತಮ ಶಿಕ್ಷಕರು ಇಲ್ಲಿ ಚಿರಸ್ಥಾಯಿಯಾಗಿದ್ದಾರೆ. ಐದಾರು ತಲೆಮಾರುಗಳಿಗೆ ಪಾಠ ಕಲಿಸಿದ್ದ ಕೀರ್ತಿ ಈ ಶಾಲೆಯ ಕಟ್ಟಡದ್ದಾಗಿದೆ.

“ಮೊದಲೆಲ್ಲ ಶಾಲೆಯನ್ನು ಉಳಿಸಿಕೊಳ್ಳಲು ಪಟ್ಟಣದ ಹಿರಿಯರು ಸಾಕಷ್ಟು ಶ್ರಮವಹಿಸಿದ್ದಾರೆ. ಪಟ್ಟಣವಲ್ಲದೆ ಸುತ್ತಮುತ್ತಲಿನ ಗ್ರಾಮದವರೂ ಕೂಡಾ ಇಲ್ಲಿಗೆ ವಿದ್ಯೆ ಹರಿಸಿ ಬರುತ್ತಿದ್ದರು. ಈ ಶಾಲೆಯ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ್ದಲ್ಲದೆ ಪಟ್ಟಣದಲ್ಲಿ ಐಕ್ಯತೆ ಮೂಡಿಸಿದೆ” ಎನ್ನುತ್ತಾರೆ ಪಟ್ಟಣದ ಮುಖ್ಯಸ್ಥರು.

ಋಣ ಸಂದಾಯವಾಗಬೇಕಿದೆ: ಗ್ರಾಮವನ್ನು ಸುಶಿಕ್ಷಿತ ಪಟ್ಟಣವಾಗಿಸುವಲ್ಲಿ ಮೌನ ಶಿಕ್ಷಣ ಸೇವೆ ನಡೆಸಿಕೊಂಡು ಬಂದಿರುವ ಶಾಲೆಯನ್ನು ಉಳಿಸಿ ಬೆಳೆಸಬೇಕಿದೆ. ಹಳೆಯ ವಿದ್ಯಾರ್ಥಿ ಸಂಘ ಈ ಕಟ್ಟಡದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಎಂಪಿಎಸ್ ಶಾಲೆಯಲ್ಲಿ ಕಲಿತ ಒಂದಿಷ್ಟು ಹಳೆಯ ವಿದ್ಯಾರ್ಥಿಗಳು ಶಾಲಾ ಕಟ್ಟಡವನ್ನು ಉಳಿಸಿಕೊಳ್ಳುವ ಸಲುವಾಗಿ ಸಂಘ ರಚಿಸಲು ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಎರಡು ಮೂರು ಸಾರಿ ಸಭೆ ಸೇರಿ ಚರ್ಚಿಸಿದ್ದಾರೆ. ಅಂದಿನ ಮುಖ್ಯ ಗುರುಗಳ ಶಿಕ್ಷಕರ ಕೊಠಡಿ, ಅದರ ಅಕ್ಕಪಕ್ಕದ ಇನ್ನೆರಡು ಕೊಠಡಿಗಳನ್ನು ಜೀವನೋದ್ಧಾರ ಮಾಡಲು ರೂಪರೇಷೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸಾರ್ಜನಿಕರಿಗೆ ಲಭ್ಯವಾಗದ ಇ-ಶೌಚಾಲಯ, ಕ್ಯಾಬಿನ್ ಶೌಚಾಲಯ; ಸ್ಥಳೀಯರ ಆಕ್ರೋಶ
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಥೋಡ ಮಾತನಾಡಿ, “ಇದು ನಮ್ಮ ಗಮನಕ್ಕೂ ಇದೆ. ಸಚಿವರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದೇವೆ. ನೆರವಿನ ಅಗತ್ಯವಿದೆ ಎಂದು ಮನವಿ ಸಲ್ಲಿಸಿದ್ದೇವೆ. ಸಚಿವರು ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ” ಎಂದರು.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು