ಪರಿಶಿಷ್ಟ ಸಮುದಾಯಗಳಿಗೆ ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡಿರುವಂತೆ ಮುಂಬರುವ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೊಳಿಸುವ ಅಗತ್ಯವಿದ್ದು, ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ. ಡಿ ಜೆ ಸಾಗರ ಬಣ) ಸಹ ಸಂಚಾಲಕ ವೈ ಸಿ ಮಯೂರ ಹೇಳಿದರು.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪರಿಶಿಷ್ಟ ಸಮುದಾಯಗಳ ಮೂರು ದಶಕಗಳ ಬೇಡಿಕೆ ಹಾಗೂ ಹೋರಾಟ ಕೊನೆಗೂ ಗೆಲುವು ಕಂಡಿದೆ. ಒಳ ಮೀಸಲಾತಿ ಹಂಚಿಕೆಯ ಐತಿಹಾಸಿಕ ನಿರ್ಣಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಕೈಗೊಂಡಿರುವುದು ಸ್ವಾಗತಿಸುತ್ತೇವೆ” ಎಂದ ಅವರು, “ಪರಿಶಿಷ್ಟ ಜಾತಿಗಳನ್ನು ಮೂರು ವರ್ಗೀಕರಣ ಮಾಡಿ ಶೇ 17 ರಷ್ಟು ಮೀಸಲು ಪ್ರಮಾಣವನ್ನು ಬಲಗೈ ಹೊಲಯ/ ಛಲವಾದಿಗಳಿಗೆ ಶೇ. 6 ಹಾಗೂ ಎಡಗೈ ಮಾದಿಗ ಜನಾಂಗಕ್ಕೆಶೇ 6 ರಷ್ಟು ಹಾಗೂ ಸ್ಪೃಷ್ಯ ಜಾತಿಗಳಿಗೆ ಶೇ 5 ರಷ್ಟು ಒಳ ಮೀಸಲಾತಿಯನ್ನು ಹಂಚಿಕೆ ಮಾಡಿರುವುದು ಅತ್ಯಂತ ವೈಜ್ಞಾನಿಕ ನಿರ್ಧಾರ” ಎಂದರು.
“ಒಳ ಮೀಸಲಾತಿ ಹಂಚಿಕೆಯಿಂದ ಯಾವ ಸಮುದಾಯಗಳಿಗೂ ನೋವಾಗಿಲ್ಲ. ಎಲ್ಲಾ ಜಾತಿಗಳಿಗೂ ಪ್ರಧಾನ್ನತೆ ನೀಡಲಾಗಿದೆ. ಜೆಟಿಲವಾಗಿದ್ದ ಸಮಸ್ಯೆಗೆ ಪರಿಹಾರ ಲಭಿಸಿದೆ. ಮೀಸಲಾತಿ ಹಂಚಿಕೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬಂದಿದ್ದು, ರಾಜ್ಯ ಸರ್ಕಾರ ಸರಿಪಡಿಸುವುದಾಗಿ ಈಗಾಗಲೇ ಭರವಸೆ ನೀಡಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ‘ಒಳಮೀಸಲಾತಿ ಜಾರಿಗೊಳಿಸಿದ ಸರ್ಕಾರದ ನಡೆ ಸ್ವಾಗತಾರ್ಹ’
ಈ ವೇಳೆ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ಮುಖಂಡರಾದ ಶರಣು ಛಲವಾದಿ, ರಮೇಶ್ ದಾರಣಾಕಾರ, ವಿಜಯಕುಮಾರ ಕಾಂಬಳೆ, ರಮೇಶ್ ನಿಂಬಾಳ್ಕರ, ಮಹಾಂತೇಶ ಸಾಹಸಬಾಳ, ಸದಾಶಿವ ಜಿಗದೋಳ ಹಾಗೂ ಪರಮೇಶ್ವರ ಇದ್ದರು.