ಚಿತ್ರಕಲಾ ಶಿಕ್ಷಕರ ಹುದ್ದೆ ಭರ್ತಿ ಮಾಡುವಲ್ಲಿ ಸರ್ಕಾರ ತಾತ್ಸಾರ ಮನೋಭಾವನೆ ಅನುಸರಿಸುತ್ತಿದೆ ಎಂದು ಖ್ಯಾತ ಚಿತ್ರಕಲಾವಿದ ಪೊನ್ನಪ್ಪ ಕಡೇಮನಿ ಹೇಳಿದರು.
ವಿಜಯಪುರದ ವರ್ಣಮಹಲ್ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಪ್ರದರ್ಶನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಮಕ್ಕಳಿಗೆ ಚಿತ್ರಕಲೆ ಬೋಧನೆ ಅಗತ್ಯವಾಗಿದೆ. ಚಿತ್ರಕಲೆ ಎಂಬುದು ಒಂದು ಅದ್ಭುತ ಕಲೆ. ಮಕ್ಕಳ ಮನಸ್ಸು ಅರಳಿಸುವ ಕಲೆ, ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲೆ ಬೋಧಿಸುವ ಶಿಕ್ಷಕರ ಕೊರತೆ ಇದೆ. ಕೂಡಲೇ ಈ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ವಿಶೇಷ ಆಸಕ್ತಿ ವಹಿಸಬೇಕು” ಎಂದು ಕರೆ ನೀಡಿದ ಅವರು, ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರ ಇನ್ನು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಸಂಘ-ಸಂಸ್ಥೆಗಳು ಕಲಾವಿದರನ್ನು ಪೋಷಿಸುವ ಕಾರ್ಯಕ್ಕೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು” ಎಂದರು.
ಸಮಾಜ ಸೇವಕ ಸುಭಾಷ ಕೆಂಭಾವಿ ಮಾತನಾಡಿ, “ಕಲಾ ಪ್ರದರ್ಶನಗಳಲ್ಲಿ ಕಲಾವಿದರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕಾದರೆ ಹೆಚ್ಚು ಹೆಚ್ಚು ಪ್ರಚಾರದ ಅಗತ್ಯತೆ ಇದೆ. ಕಲಾ ಪ್ರದರ್ಶನ ಏರ್ಪಡಿಸುವುದರಿಂದ ಅನೇಕ ಕಲಾವಿದರು ತಮ್ಮ ಕಲಾ ವಿದ್ವತ್ತು ಪ್ರದರ್ಶಿಸುವುದು ದೊರಕುತ್ತದೆ” ಎಂದರು.
ಇದನ್ನೂ ಓದಿ: ವಿಜಯಪುರ | ಮೇ 14ರಂದು ರಾಜ್ಯಮಟ್ಟದ ಜನ ಹೋರಾಟ
ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯೆ ರಾಜೇಶ್ವರಿ ಮೋಪಗಾರ, ಮೋಹನ್ ನಾಯಕ್, ವರ್ಣಮಹಲ್ ಸಂಸ್ಥೆಯ ಅಧ್ಯಕ್ಷ ವಿಜಯ್ ನಾಯಕ, ಮಹದೇವಪ್ಪ ಮೋಪಗಾರ ಸೇರಿ ಇತರರು ಇದ್ದರು.