ಅಕ್ರಮವಾಗಿ ಕಬಳಿಸಿರುವ ಸರ್ಕಾರಿ ಜಮೀನುಗಳನ್ನು ಕೂಡಲೇ ಸರ್ಕಾರದ ವಶಕ್ಕೆ ಪಡೆದುಕೊಂಡು, ಸಾರ್ವಜನಿಕ ಕೆಲಸಕ್ಕೆ ಉಪಯೋಗ ಮಾಡಿಕೊಡಬೇಕೆಂದು ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
“ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಜಮೀನು ಸರ್ಕಾರಿ ಮುಫತ್ ಗಾಯರಾಣ ದನಗಳ ಚಿರಾಯಿ 214 ಎಕರೆ ಜಮೀನು ಅರಣ್ಯ ಭೂಮಿಯಾಗಿದ್ದು, ಈ ಭೂಮಿಯನ್ನು ಹಲವು ಪ್ರಭಾವಿಗಳು ಅಕ್ರಮಿಸಿಕೊಂಡು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರಿ ಭೂಮಿ ಕಾಪಾಡಬೇಕಾದ ಆಡಳಿತವು ನಿರ್ಲಕ್ಷ್ಯ ಮಾಡುತ್ತಿದೆ. 214 ಎಕರೆ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಒಂದೊಂದು ದಾಖಲೆಗಳಲ್ಲಿ ಒಂದೊಂದು ಹೆಸರುಗಳಿದ್ದು, ಇದು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ವಿಚಾರವಾಗಿ ಕೂಡಲೇ ಸಿಒಡಿ ತನಿಖಾಧಿಕಾರಿಗಳ ಮುಖಾಂತರ ತನಿಖೆ ನಡೆಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕನ್ನಡಪರ ಸಂಘಟನೆ ಮುಖಂಡರ ಬಂಧನಕ್ಕೆ ಕರವೇ ಖಂಡನೆ
ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು, ಸೈನಿಕರು, ಜಿಲ್ಲಾಧ್ಯಕ್ಷ ಅಶೋಕ ಜಾಧವ, ವಿಜಯಪುರ ನಗರ ಘಟಕದ ಅಧ್ಯಕ್ಷ ವಿಕ್ರಮ ವಾಘೋಮೋಡೆ, ಇಂಡಿ ತಾಲೂಕು ಅಧ್ಯಕ್ಷ ಗಣಪತಿ ರಾಥೋಡ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಚಡಚಣ ಸೇರಿದಂತೆ ಇಂಡಿ ತಾಲೂಕಿನ ಸದಸ್ಯರು ಇದ್ದರು.