ವಿದ್ಯಾರ್ಥಿ ಪರಿಷತ್ ಕೇವಲ ಒಂದು ಸಾಮಾಜಿಕ ಸಂಘಟನೆ ಮಾತ್ರವಲ್ಲ, ನಮ್ಮ ಪೂರ್ವಜರ ಹೋರಾಟದ ಪ್ರತಿಫಲದ ಚಳವಳಿ. ಈ ಚಳುವಳಿಯನ್ನ ನಮ್ಮ ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಕರ್ತವ್ಯ ನಮ್ಮ ನಿಮ್ಮೆಲ್ಲರ ಮತ್ತು ಈಗ ಸೇರಿರುವ ಯುವನಾಯಕರ ಹೊಣೆಯಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ ತಿಳಿಸಿದರು.
ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಸರ್ಕಿಟ್ ಹೌಸ್‌ನಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳ ಕುಂದುಕೊರತೆಗಳು ಮತ್ತು ಶೋಷಿತ ಸಮಾಜದ ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
“ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ಮೂಲೆಮೂಲೆಯಲ್ಲಿ ಶೋಷಿತರ ಪರ ಧ್ವನಿ ಎತ್ತುವ ಸ್ವತಂತ್ರ ಸಂಘಟನೆಯ ಭಾಗವಾಗಿರುವ ನಮಗೆ ಹೆಮ್ಮೆಯ ವಿಚಾರ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಕುಂದುಕೊರತೆಗೆ ತಕ್ಷಣ ಸ್ಪಂದಿಸುವ ಕಾರ್ಯವನ್ನು ದಲಿತ ವಿದ್ಯಾರ್ಥಿ ಪರಿಷತ್ ಹಿಂದಿನಿಂದ ಮಾಡುತ್ತಾ ಬಂದಿದೆ, ಮುಂದೆಯೂ ಮಾಡುತ್ತದೆ ಅದರಲ್ಲಿ ಯಾವುದೇ ಸಂದೇಹವಿಲ್ಲ” ಎಂದರು.
“ನಾವೆಲ್ಲರೂ ಸಭೆ ಸೇರಿರುವ ಉದೇಶವೇನೆಂದರೆ ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ನಮ್ಮ ವಿದ್ಯಾರ್ಥಿ ಸಂಘಟನೆಯ ಕರ್ತವ್ಯ, ಅದರ ಜತೆ ಜತೆಗೆ ನಮ್ಮ ಜಿಲ್ಲೆಯಲ್ಲಿರುವ ವಸತಿ ನಿಲಯಗಳಲ್ಲಿ ಓದಿ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಹೋದರ ಸಹೋದರರಿಗೆ ಅಭಿನಂದನಾ ಸಮಾರಂಭವನ್ನು ಮಾಡುವಂಥ ಆಲೋಚನೆಯ ವಿಚಾರವಾಗಿ ನಾವೆಲ್ಲರೂ ಸೇರಿದ್ದೇವೆ. ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ” ಎಂದರು.
ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ಸಹ ಕಾರ್ಯದರ್ಶಿ ಮಾದೇಶ್ ಚಾಲವಾದಿಯವರು ಪದಾಧಿಕಾರಿಗಳನ್ನು ಸ್ವಾಗತಿಸಿ, “ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಈ ಸ್ಫೂರ್ತಿದಾಯಕ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ನಾವೆಲ್ಲರೂ ಒಂದೊಂದು ಜವಾಬ್ದಾರಿ ತೆಗೆದುಕೊಂಡು ಯಶಸ್ವಿ ಕಾರ್ಯಕ್ರಮ ಮಾಡೋಣ” ಎಂದರು.
ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಸತೀಶ್ ಅಂಜುಟಗಿ, ಸೇರಿರುವ ಎಲ್ಲ ವಿದ್ಯಾರ್ಥಿಗಳಿಗೆ ಜವಾಬ್ದಾರಿಯನ್ನು ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ರಾಜ್ಯ ಮಟ್ಟದ ಯೋಗ ಸ್ಪರ್ಧೆ; ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಣೆ
ಈ ಸಭೆಯಲ್ಲಿ ದಾವುದ ನಾಯ್ಕೊಡಿಯವರನ್ನ ವಿಜಯಪುರ ನಗರ ಘಟಕದ ಅಧ್ಯಕ್ಷರನ್ನಾಗಿ, ಯುವರಾಜ ಓಲೇಕಾರ್ ಅವರನ್ನ ವಸತಿ ಸಮಿತಿ ಅಧ್ಯಕ್ಷರನ್ನಾಗಿ, ಯಾಸಿನ್ ಇನಾಮದಾರ ಅವರನ್ನು ಜಿಲ್ಲಾ ಸಾಮಾಜಿಕ ಜಾಲತಾಣದ ಸದಸ್ಯರನ್ನಾಗಿ, ಸಂದೇಶ್ ಕುಮುಟಗಿ ಅವರನ್ನ ಶಾಲಾ ಕಾಲೇಜು ಸಂಪರ್ಕ ಕಾರ್ಯದರ್ಶಿಯನ್ನಾಗಿ, ಅಕ್ಷಯ್ ಅವರನ್ನ ಗ್ರಂಥಾಲಯ ಸಮಿತಿ ಅಧ್ಯಕ್ಷರನ್ನಾಗಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದರು.
ಈ ಸಭೆಯಲ್ಲಿ ಗೌಡಪ್ಪನವರು, ದರ್ಶನ್, ಯಮನೂರಿ, ಮಾಂತೇಶ, ಮಂಜುನಾಥ್, ಸದಾಶಿವ ಸೇರಿದಂತೆ ಬಹುತೇಕರು ಇದ್ದರು.
