ಬಿಜೆಪಿಯಲ್ಲಿರುವ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳಲು ಹೇಳಿ, ‘ಅವರ ತಾಟಿನಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ತಾಟಿನಲ್ಲಿರುವ ನೊಣದ ಬಗ್ಗೆ ಯಾಕೆ ಮಾತನಾಡುತ್ತಾರೆʼ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟವಾಗುತ್ತದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಸವದಿ, ಶಾಸಕಾಂಗ ಸಭೆಯಲ್ಲಿ ಏನೇನು ಆಗಿದೆ ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದರು.
ನಮ್ಮ ಬಗ್ಗೆ ಮಾತನಾಡೋದು ಅವಶ್ಯಕತೆಯಿಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ ಒಂದಾಗಿ ಕೆಲಸ ಮಾಡುತ್ತಿದ್ದೇವೆ, 136ಜನ ಶಾಸಕರು ಒಂದಾಗಿ ಕೆಲಸ ಮಾಡುತ್ತಿದ್ದೇವೆ ನೆಮ್ಮದಿಯಾಗಿ ಜನರು ಐದು ಗ್ಯಾರಂಟಿಗಳ ಮೂಲಕ ತೃಪ್ತಿಯಾಗಿದ್ದಾರೆ ಅದನ್ನು ಬಿಜೆಪಿಯವರಿಗೆ ನೋಡಲಾಗುತ್ತಿಲ್ಲ ಎಂದರು.
ಜನೇವರಿ 26ಮುಗಿಯಲಿ ಯಾರು ಯಾರನ್ನು ಸೆಳೆಯುತ್ತಾರೆ ನೋಡೋಣ. ಎನ್ನುವ ಮೂಲಕ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸವದಿ ಸುಳಿವು ನೀಡಿದರು. ಜನಾರ್ಧನ ರೆಡ್ಡಿಯನ್ನು ವಾಪಸ್ ಬಿಜೆಪಿಗೆ ಕರೆ ತರೋ ವಿಚಾರಕ್ಕೆ, ರೆಡ್ಡಿಯವರು ಕರೆದುಕೊಳ್ಳಲಿ ಯಾರು ಬೇಡ ಅಂತಾರೆ. ಯಾರು ಅವರನ್ನು ಹೊರ ಹಾಕಿದವರು ಯಾರು? ಒಳಗೆ ಕರೆದುಕೊಳ್ಳುವವರು ಅವರೇ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಪರಿಸ್ಥಿತಿ ಇದೆ. ಈ ಕಾರಣಕ್ಕೆ ಆ ಪಕ್ಷ ತ್ಯಜಿಸಿದ್ದೇನೆ. ಬಿಜೆಪಿಯಲ್ಲಿ ಯಾವ ಭವಿಷ್ಯವಿಲ್ಲ, ಬಿಜೆಪಿಯಲ್ಲಿ ಆಂತರಿಕ ಕಲಹ ವ್ಯಾಪಕವಾಗಿದೆ. ಜನತೆ ಈ ಎಲ್ಲ ಗೊಂದಲ, ಕಲಹವನ್ನು ಗಮನಿಸುತ್ತಲೇ ಇದ್ದಾರೆ. ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ. ರಾಜ್ಯದಲ್ಲಿ ಇನ್ನೂ ಎರಡು ದಶಕಗಳ ಕಾಲ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಅದು ಪ್ರತಿಪಕ್ಷದಲ್ಲಿಯೇ ಇರುತ್ತದೆ ಎಂದರು.