ಎಚ್ಐವಿ ಸೋಂಕಿತರಿಗೆ ಸಮಾಜದಲ್ಲಿ ಯಾವುದೇ ತಾರತಮ್ಯ ಮಾಡದೆ ಸಮಾನವಾದ ಅವಕಾಶಗಳನ್ನು ನೀಡಬೇಕು ಎಂದು ವಿಜಯಪುರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ ಕುಂದರ್ ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ನಿಯಂತ್ರಣ ಘಟಕ, ಸ್ವಯಂ ಸೇವಾ ಸಂಸ್ಥೆಗಳು, ಎನ್‌ಎಸ್‌ಎಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಸಂತ ಅಣ್ಣಮ್ಮ ದೇವಾಲಯ ಸಭಾಭವನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಚ್‌ಐವಿ ಸೋಂಕನ್ನು ನಿಯಂತ್ರಣ ಮಾಡಲು ಸೋಂಕಿತರಿಗೆ ಸೇವಾ ಸೌಲಭ್ಯಗಳನ್ನು ಒದಗಿಸಿಕೊಡಲು ಎಚ್ಐವಿ ಕಾಯ್ದೆ 2017ರಲ್ಲಿ ಜಾರಿಗೆ ಬಂದಿದೆ. ಸೋಂಕಿತರ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ಇದ್ದಲ್ಲಿ ಅವುಗಳ ಮಾಹಿತಿ ನಮ್ಮ ಗಮನಕ್ಕೆ ತಂದಲ್ಲಿ ತ್ವರಿತವಾಗಿ ಪ್ರಕರಣಗಳನ್ನು ಬಗೆಹರಿಸಿಕೊಡಲಾಗುವುದು” ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ ಮಾತನಾಡಿ, “ಎಚ್ಐವಿ ಸೋಂಕಿತರು ಸರಿಯಾದ ಚಿಕಿತ್ಸೆಯನ್ನು ಪಡೆದಲ್ಲಿ ಸಾಮಾನ್ಯ ಜನರಂತೆ ಜೀವನ ನಡೆಸಬಹುದು” ಎಂದು ತಿಳಿಸಿದರು.
ಜಲಶಾಸ್ತ್ರ ಚಿಕಿತ್ಸಕ ಡಾ. ಶಿವಾನಂದ್ ಮಾಸ್ತಿಹೂಳಿ ಮಾತನಾಡಿ, “ಎಚ್ಐವಿ ಹರಡುವಿಕೆ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿರುವುದಕ್ಕೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಹಾಗೂ ಸಿಬಿಒ ಎನ್‌ಜಿಒ ಅತ್ಯುತ್ತಮ ಸೇವೆ ನೀಡಿರುವುದರಿಂದಲೇ ಸಾಧ್ಯವಾಗಿದೆ” ಎಂದು ತಿಳಿಸಿದರು.
“1986ರಲ್ಲಿ ಭಾರತದಲ್ಲಿ ಎಚ್ಐವಿ ಕಂಡುಬಂದಾಗ ಈ ರೋಗದ ಬಗ್ಗೆ ಅತ್ಯಂತ ಭಯಾನಕ ವಾತಾವರಣವಿತ್ತು. ಆದರೆ, ಇದರ ಬಗ್ಗೆ ಜನ ಜಾಗೃತಿ ಮೂಡಿಸಿರುವುದರಿಂದ ಹಾಗೂ ಅತ್ಯುತ್ತಮ ಔಷಧಗಳನ್ನು ಒದಗಿಸಿರುವುದರಿಂದ ಹರಡುವಿಕೆ ಪ್ರಮಾಣ ಕಡಿಮೆಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ
ಜಿಲ್ಲಾ ಸಂರಕ್ಷಣಾಧಿಕಾರಿ ಡಾ. ಕವಿತಾ ದೊಡ್ಮನಿ, ಸಂತಾನಮ್ಮ ದೇವಾಲಯದ ಜಯ ಸಿಸ್ಟರ್, ಕಲ್ ಅಮೀನ್ ಅಧೀಕ್ಷಕ ಡಾ. ಜಿಲಾನಿ ಅವಟಿ, ಪ್ರಸೋತಿ ವಿಭಾಗದ ಮುಖ್ಯಸ್ಥ ಡಾ.ವಿದ್ಯ ತಬ್ಬಿ, ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್, ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ ಪ್ರೊಫೆಸರ್ ಪ್ರಕಾಶ್ ರಾಥೋಡ್, ಸಂಕಲ್ಪ ಸಂಸ್ಥಾಧ್ಯಕ್ಷ ಗಂಗಯ್ಯ ಹಿರೇಮಠ್ ಸೇರಿದಂತೆ ಇತರರು ಇರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ವಿಜಯಪುರ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಿಂದ ಸಂತಾನಮ್ಮ ದೇವಾಲಯದವರೆಗೂ ಎಚ್‌ಐವಿ ಏಡ್ಸ್ ನಿಯಂತ್ರಣದ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹದೇವ್ ಮುರುಗಿ ಚಾಲನೆ ನೀಡಿದರು.