ಅರೆ ನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಹಾಗೂ ಅದೇ ಪ್ರದೇಶದ 20-30 ಮೀ. ತಗ್ಗಿನಲ್ಲಿ ಪತಿ ಬೇವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಗೆದ್ದಲಮರಿ ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ನಡೆದಿದೆ. ಘಟನೆ ಸೋಮವಾರ ರಾತ್ರಿ ನಡೆದಿದ್ದು, ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೆದ್ದಲಮರಿ ಗ್ರಾಮದ ನಿವಾಸಿ ಸಿದ್ದಪ್ಪ ಮಲ್ಲಪ್ಪ ಹರನಾಳ (33), ಪತ್ನಿ ಮೇಘಾ ಉರ್ಫ್ ಮಾನವ್ವ ಸಿದ್ದಪ್ಪ ಹರನಾಳ ಶವವಾಗಿ ದೊರೆತ ದಂಪತಿಯಾಗಿದ್ದಾರೆ. 8 ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸ್ಥಳದಲ್ಲಿ ಮೃತ ಮೇಘಾ ತನ್ನ ಸೀರೆಯಿಂದಲೇ ಕುತ್ತಿಗೆಗೆ ಸುತ್ತಿರುವುದು ಕಂಡು ಬಂದಿದೆ. ಕೆಲ ಮೀಟರ್ ಅಂತರದಲ್ಲಿ ಬೇವಿನ ಮರದ ಟೊಂಗೆಗೆ ಪತಿಯ ಶವ ಹಗ್ಗವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನ್ನ ಅಳಿಯ ಸಿದ್ದಪ್ಪನೇ ಮೇಘಾಳನ್ನು ಕೊಲೆ ಮಾಡಿ ನಂತರ ತಾನೂ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾನೆ. ಸಿದ್ದಪ್ಪನ ಸಹೋದರ ಶ್ರೀಕಾಂತ ಮಲ್ಲಪ್ಪ ಹರನಾಳ, ತಾಯಿ ಶಾಂತಮ್ಮ ಮಲ್ಲಪ್ಪ ಹರನಾಳ ಅವರ ಕಿರುಕುಳವೇ ಕೊಲೆಗೆ ಕಾರಣ ಎಂದು ಮೇಘಾಳ ತಾಯಿ ಗದ್ದೆಮ್ಮ ಬಸಪ್ಪ ಹೊಸಮನಿ ಮುದ್ದೇಬಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಹಿನ್ನೆಲೆ ಆರೋಪಿ ಶ್ರೀಕಾಂತನನ್ನು ಪೊಲೀಸರು ಬಂಧಿಸಿದ್ದಾರೆ. ಶಾಂತಮ್ಮ ತಲೆಮರೆಸಿಕೊಂಡಿದ್ದಾಳೆ. ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಶವಾಗಾರದಲ್ಲಿರುವ ಸಿದ್ದಪ್ಪನ ಶವವನ್ನು ಸಂಸ್ಕಾರಕ್ಕೆ ಒಯ್ಯಲು ಯಾರೂ ಇಲ್ಲದ ಕಾರಣ, ಪತ್ನಿಯ ಮನೆಯವರು ಅವನ ಶವ ಒಯ್ಯಲು ನಿರಾಕರಿಸಿದ್ದರಿಂದ ಶವಾಗಾರದಲ್ಲಿಯೇ ಸಂಜೆವರೆಗೂ ಶವ ಅನಾಥವಾಗಿತ್ತು. ಅನೈತಿಕ ಸಂಬಂಧ ಈ ಘಟನೆಗೆ ಕಾರಣ ಎನ್ನುವ ಮಾತು ಗ್ರಾಮದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ವಿಜಯಪುರ | ಸರ್ಕಾರಿ ಪದವಿ ಕಾಲೇಜು ಮಂಜೂರಿಗೆ ದಲಿತ ವಿದ್ಯಾರ್ಥಿ ಪರಿಷತ್ತು ಆಗ್ರಹ
ಘಟನೆ ಕುರಿತು ಎಸ್‌ಪಿ ಲಕ್ಷ್ಮಣ ನಿಂಬರಗಿ ಸುದ್ದಿಗಾರರೊಂದಿಗೆ ಮಾತನಾಡಿ, “ಪತ್ನಿಯ ಶವ ತನ್ನದೇ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತಿಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಮುದ್ದೇಬಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತನಿಖೆ ನಂತರವೇ ಗೊತ್ತಾಗಲಿದೆ. ಪತಿ ನೇಣು ಹಾಕಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇದರ ಸತ್ಯಾಸತ್ಯತೆ ತಿಳಿದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದರು.