ಮುಂಜಾನೆ 5-30ರ ಸುಮಾರಿಗೆ ಪೊಲೀಸರು ಅಕ್ರಮವಾಗಿ ಮನೆ ಪ್ರವೇಶ ಮಾಡಿದ್ದು, ದಲಿತ ಕುಟುಂಬಕ್ಕೆ ಕಿರುಕುಳ ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದಿದೆ.
ದಲಿತ ಕುಟುಂಬದ ಮನೆಯ ಬಾಗಿಲು ತಟ್ಟಿ ಮನೆಯಲ್ಲಿದ್ದ ಮಹಿಳೆಯರು, ಮಕ್ಕಳನ್ನು ಹೊರಹಾಕಿ ಅಕ್ರಮವಾಗಿ ಮನೆ ಪ್ರವೇಶ ಮಾಡಿದ್ದೂ ಅಲ್ಲದೆ ನೀವು ನಮಗೆ ಸಹಕರಿಸದಿದ್ದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇವೆಂದು ಹೇಳಿ ಇಡೀ ಕುಟುಂಬವನ್ನು ಹೆದರಿಸಿರುವ ಘಟನೆ ಬೆಳಕಿಗೆ ಬಂದಿದೆ.
“ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದಲಿತ ಕುಟುಂಬವೊಂದು ತನ್ನ ಪರಿವಾರದೊಂದಿಗೆ ನಿದ್ರೆಯಲ್ಲಿ ಇರುವಾಗ ಸುಖಾಸುಮ್ಮನೆ ಪೊಲೀಸರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಅಲ್ಲದೆ ಅವರನ್ನು ಮನೆಯಿಂದ ಹೊರಗೆಹಾಕಿ ಹೆದರಿಸಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ವಿಜಯಪುರ ಜಿಲ್ಲಾ ಸಮಿತಿಯ ಸಹ ಸಂಚಾಲಕ ಚೆನ್ನು ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬಸವಣ್ಣ ಹುಟ್ಟಿದ ನಾಡಿನಲ್ಲಿ ಇಂದಿಗೂ ಜಾತೀಯತೆ, ಅಸಮಾನತೆ ತಾಂಡವವಾಡುತ್ತಿದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಸವನ ಬಾಗೇವಾಡಿ ಪೋಲಿಸ್ ಅಧಿಕಾರಿಗಳೂ ಕೂಡಾ ದಲಿತರನ್ನು ನೋಡಿದರೆ ಸಾಕು ಮೈಮೇಲೆ ಹಾವು ಹರಿದಂತೆ ನಡೆದುಕೊಳ್ಳುತ್ತಿದ್ದಾರೆ. ಒಂದು ಕುಟುಂಬವನ್ನು ಸುಖಾ ಸುಮ್ಮನೆ ಮನೆಯಿಂದ ಹೊರಹಾಕಿ ತಪಾಸಣೆ ಮಾಡುವ ಅನಿವಾರ್ಯತೆ ಏನಿತ್ತು” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರೈತರಿಗೆ ಗುಣಮಟ್ಟ, ಸಮರ್ಪಕ ವಿದ್ಯುತ್ ಪೂರೈಸಬೇಕು: ರೈತ ಸಂಘ ಆಗ್ರಹ
“ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ಬಾಗೇವಾಡಿ ಪೊಲೀಸರು ದಲಿತ ಕುಟುಂಬಕ್ಕೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಹಾಗೂ ಈ ಅಧಿಕಾರಿಗಳನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.