ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆ ಎದುರಾಗಿದ್ದು, ಬರ ಆವರಿಸಿದ್ದು, ವಿದ್ಯುತ್ ಅಭಾವವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಸಮರ್ಪಕ ವಿದ್ಯುತ್ ಆಟಕ್ಕೆ ಬೇಸತ್ತ ರೈತರು, ವಿದ್ಯುತ್ ವಿತರಣಾ ಘಟಕದ ಆವರಣಕ್ಕೆ ಮೊಸಳೆ ತಂದು ಬಿಟ್ಟು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ್ ಗ್ರಾಮದಲ್ಲಿ ನಡೆದಿದೆ.
“ಪ್ರತಿದಿನ ತಡರಾತ್ರಿ ವಿದ್ಯುತ್ ನೀಡುತ್ತಾರೆ. ಕತ್ತಲೆಯಲ್ಲಿ ಹೊಲಗಳಿಗೆ ಹೋಗಿ ನೀರುಣಿಸುವುದು ಹೇಗೆ?. ಕತ್ತಲೆಯಲ್ಲಿ ಜಲಚರ ಪ್ರಾಣಿಗಳಿಂದ ತೊಂದರೆ ಉಂಟಾಗುತ್ತಿದೆ ಎಂದರೂ ಕೂಡ ಅಧಿಕಾರಿಗಳು ಕೇಳುತ್ತಿಲ್ಲ. ರಾತ್ರಿ ವೇಳೆ ವಿದ್ಯುತ್ ನೀಡಿದರೆ ನಾವೇನು ಮಾಡೋದು. ನಮ್ಮ ಸಮಸ್ಯೆ ಅಧಿಕಾರಿಗಳಿಗೆ ಅರ್ಥವಾಗಲೆಂದು ಜಮೀನಿನಲ್ಲಿ ಸಿಕ್ಕ ಮೊಸಳೆ ತಂದಿದ್ದೇವೆ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು ದಸರಾ | ಹಣ್ಣು-ಹೂವುಗಳ ಬೆಲೆ ಏರಿಕೆ
ನಿನ್ನೆ ರಾತ್ರಿ ಪಾಳಿಯಲ್ಲಿ ನೀರು ಹಾಯಿಸುವಾಗ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಅದೇ ಮೊಸಳೆಯನ್ನು ಹಿಡಿದು ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಿ ಮೊಸಳೆ ತೆಗೆದುಕೊಂಡ ಹೋಗಿದ್ದಾರೆ.