ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಾಪಮಾನ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗೃತೆ ಕ್ರಮ ವಹಿಸಬೇಕೆಂದು ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆ ಸೂಚನೆಯ ನೀಡಿದೆ.
“ಸಾರ್ವಜನಿಕರು, ಅತಿಯಾದ ಬಿಸಿಲಿನ ಕುರಿತು ರೇಡಿಯೋ, ಟಿವಿ, ದಿನಪತ್ರಿಕೆಗಳಲ್ಲಿ ಬರುವ ಮುನ್ಸೂಚನೆಗಳನ್ನು ಪಡೆದುಕೊಳ್ಳಬೇಕು. ಬಾಯಾರಿಕೆಯಿಲ್ಲದಿದ್ದರೂ ಸಾಕಷ್ಟು ಮತ್ತು ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಕುಡಿಯಬೇಕು. ಹಗುರವಾದ, ತಿಳಿ-ಬಣ್ಣದ, ಸಡಿಲವಾದ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳನ್ನು ಧರಿಸಬೇಕು” ಎಂದು ತಿಳಿಸಿದೆ.
“ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು. ಬಸ್ಸಿನಲ್ಲಿ ದೂರದ ಪ್ರಯಾಣ ಕೈಗೊಳ್ಳುವುದಿದ್ದರೆ ರಾತ್ರಿ ವೇಳೆ ಪ್ರಯಾಣಿಸುವುದು ಉತ್ತಮ, ಒಂದು ವೇಳೆ ಹಗಲಿನಲ್ಲಿಯೇ ಪ್ರಯಾಣ ಮಾಡುವ ಸಂದರ್ಭ ಬಂದರೆ, ಪ್ರಯಾಣ ಮಾಡುವಾಗ, ನಿಮ್ಮೊಂದಿಗೆ ನೀರನ್ನು ಒಯ್ದಿರಿ. ನೀವು ಹೊರಗೆ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿಯನ್ನು ಬಳಸಿ ಮತ್ತು ನಿಮ್ಮ ತಲೆ, ಕುತ್ತಿಗೆ, ಮುಖ ಹಾಗೂ ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನೂ ಕೂಡಾ ಬಳಸಿ” ಎಂದು ಸಾರ್ವಜನಿಕರಿಗೆ ಸಲಹೆ ನೀಡಿದೆ.
“ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ಶರಬತ್, ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಿ. ಇದರಿಂದ ದೇಹವನ್ನು ಪುನಃ ತಂಪಾಗಿಡಲು ಸಹಾಯವಾಗುತ್ತದೆ” ಎಂದು ಆರೋಗ್ಯ ಇಲಾಖೆ ತಿಳಿಸಿದೆ.
“ಆದಷ್ಟು ಫ್ಯಾನ್‌ಗಳನ್ನು ಬಳಸಿ, ಆಗಾಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿ. ಕೆಲಸದ ಸಮಯವನ್ನು ಆದಷ್ಟು ತಂಪಾದ ಸಮಯದಲ್ಲಿ ಮಾಡುವುದು ಒಳ್ಳೆಯದು ಹಾಗೂ ಕೆಲಸದ ಸ್ಥಳದ ಬಳಿ ತಂಪಾದ ಕುಡಿಯುವ ನೀರು ಇರುವಂತೆ ನೋಡಿಕೊಳ್ಳಬೇಕು. ಕೆಲಸ ನಿರ್ವಹಿಸುವ ಗರ್ಭಿಣಿಯರು ಮತ್ತು ಅನಾರೋಗ್ಯದಲ್ಲಿರುವ ಕಾರ್ಮಿಕರ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಕಲ್ಲಂಗಡಿ, ಕರಬೂಜ, ಕಿತ್ತಳೆ ದ್ರಾಕ್ಷಿ, ಅನನಾಸ್, ಸೌತೆಕಾಯಿ, ಎಳನೀರನ್ನು ಹೆಚ್ಚಾಗಿ ಸೇವಿಸಬೇಕು” ಎಂದು ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಬಿಸಿಗಾಳಿ: ಅಗತ್ಯ ಮುನ್ನೆಚ್ಚರಿಕೆಗಳೇನು?
“ನವಜಾತ ಶಿಶುಗಳು, ಚಿಕ್ಕಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು, ಅದರಲ್ಲೂ ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಬೇಕು” ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
“ಪ್ರಾಣಿ/ಪಕ್ಷಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಿ. ಪ್ರಾಣಿಗಳ ಮೈಮೇಲೆ ಒದ್ದೆಯಾದ ಬಟ್ಟೆಗಳನ್ನು ಹಾಕಿ. ಈ ಮೂಲಕ ಪ್ರಾಣಿಗಳನ್ನು ಬಿಸಿಲಿನಿಂದ ರಕ್ಷಿಸಿ” ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.