ನಾರಾಯಣಪುರ ಜಲಾಶಯದ ಕೃಷ್ಣ ನದಿಯ ಹಿನ್ನೀರು ಬಳಸಿ ವಿದ್ಯುತ್ ಉತ್ಪಾದಿಸುತ್ತಿರುವ ಮುರುಡೇಶ್ವರ ಪವರ್ ಕಾರ್ಪೊರೇಷನ್ ಕಂಪೆನಿ(ಎಂಪಿಸಿಎಲ್) ವಿರುದ್ಧ ತನಿಖೆ ನಡೆಸಿ 3 ದಿನಗಳೊಳಗಾಗಿ ವರದಿ ಸಲ್ಲಿಸಲು ವಿಜಯಪುರ ಜಿಪಂ ಸಿಇಒ ಜಿಲ್ಲಾ ಮಟ್ಟದ ತಂಡ ರಚನೆ ಮಾಡಿದ್ದನ್ನು ಪರಿಗಣಿಸಿ, ಯುವಜನ ಸೇನೆ ಸಂಘಟನೆಯು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಿಂಪಡೆದಿದೆ.
ವಿಜಯಪುರ ಜಿಲ್ಲಾ ಪಂಚಾಯತಿ ಸಿಇಒ ಅದೇಶಿಸಿರುವ ತಂಡ ರಚನೆಯ ಆದೇಶ ಪತ್ರವನ್ನು ಮುದ್ದೇಬಿಹಾಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್ ಎಸ್ ಮಸಳಿಯವವರು ಯುವಜನ ಸೇನೆ ಹೋರಾಟಗಾರರಿಗೆ ಹಸ್ತಾಂತರಿಸಿ, ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಸೇರಿದಂತೆ ಇತರರಿಗೆ ಕಬ್ಬಿನ ಹಾಲು ಕುಡಿಸುವ ಮೂಲಕ ಧರಣಿ ಅಂತ್ಯಗೊಳಿಸಿದರು.
“ತನಿಖೆಯಲ್ಲಿ ಲೋಪ ಕಂಡುಬಂದರೆ ಮತ್ತೇ ಹೋರಾಟ ಮುಂದುವರಿಸಬೇಕಾಗುತ್ತದೆ” ಎಂದು ಶಿವಾನಂದ ವಾಲಿ ಅಧಿಕಾರಿಗೆ ಎಚ್ಚರಿಸಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮ ಪಂಚಾಯಿತಿಗೆ ಮುರುಡೇಶ್ವರ ಪವರ್ ಕಾರ್ಪೊರೇಷನ್ ಕಂಪೆನಿ ಹಲವು ವರ್ಷಗಳಿಂದ ವಿದ್ಯುತ್ ಉತ್ಪಾದಿಸಿದ ತೆರಿಗೆ ತುಂಬದೆ ಕೊಟ್ಯಂತರ ರೂಪಾಯಿ ವಂಚಿಸಿರುವ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ತಾ.ಪಂ ಎದುರು ಯುವಜನ ಸೇನೆ ಕಾರ್ಯಕರ್ತರು ಕಳೆದ 5 ದಿನಗಳಿಂದ ಅನಿರ್ದಿಷ್ಟಾವಧಿಯ ಧರಣಿ ನಡೆಸುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಳೇ ಉಂಡವಾಡಿ ನೀರು ಸರಬರಾಜು ಯೋಜನೆ ಸ್ಥಾವರಕ್ಕೆ ಹೆಚ್ ಸಿ ಮಹದೇವಪ್ಪ ಭೇಟಿ
ಧರಣಿ ಸ್ಥಳಕ್ಕೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಪಿಎಸ್‌ಐ ಸಂಜಯ್ ತಿಪ್ಪಾರೆಡ್ಡಿ ಭೇಟಿ ನೀಡಿ ಹೋರಾಟಗಾರರ ಬೇಡಿಕೆ ಆಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ, ಗಂಗು ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಮಲ್ಲು ತಳವಾರ ಬಿಜ್ಜುರು ಇನ್ನಿತರರು ಇದ್ದರು.
ತನಿಖಾ ತಂಡ: ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ತನಿಖಾ ತಂಡದ ಮುಖ್ಯಸ್ಥರಾಗಿದ್ದಾರೆ. ಡಿ ಬಿ ಮೇಂದಳಿ, ಗ್ರಾಪಂ ಪಿಡಿಒ(ಆಡಳಿತ) ಉಮೇಶ ರಾಠೋಡ, ಜಿಪಂ ಎಸ್‌ಡಿಸಿ(ಆಡಳಿತ ಶಾಖೆ) ಮಹೇಶ ಮಠಪತಿ, ಜಿಪಂ ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರವಿಂದ ಬಿರಾದಾರ ತಂಡದ ಸದಸ್ಯರಾಗಿದ್ದಾರೆ.
