ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ವತಿಯಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮ ಅಧಿನಿಯಮ 1978ನ್ನು ಕರ್ನಾಟಕ ಪೌರ ಸೇವಾ ನಾಗರಿಕರಿಗೆ ಅನ್ವಯಿಸುವ ಹಾಗೆ, ಪಂಚಾಯತ್ ರಾಜ್ಯ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿರುವ ಮಾದರಿಯಲ್ಲಿಯೇ, ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಜಿಪಿಎಫ್, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿ ದೀಪ ಸಹಾಯಕ ಲೋಡರ್ಸ್, ಪಾರ್ಕ್ ಗಾರ್ಡನರ್, ಕಾವಲುಗಾರ, ಸ್ಯಾನಿಟರಿ ಸೂಪರ್ವೈಸರ್ ಸೇರಿದಂತೆ ವಿವಿಧ ವೃಂದಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಏಳನೇ ವೇತನ ಹಾಗೂ 2023-2024ನೇ ಸಾಲಿನಲ್ಲಿ ನೇಮಕಾತಿಯಲ್ಲಿ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಲ್ಯಾಬ್ ಟೆಕ್ನಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅವಕಾಶ ಕಲ್ಪಿಸಿದ್ದು, ಈ ಹುದ್ದೆಗಳು ನಗರ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರಿನ ಗುಣಮಟ್ಟ ನಿರ್ವಹಣೆಗೆ ಅತ್ಯಂತ ಅವಶ್ಯಕವಾಗಿದೆ. ಆದರೆ ಈ ಹುದ್ದೆಗಳಿಗೆ ಇಲ್ಲಿವರೆಗೂ ನೇಮಕಾತಿ ಮಾಡಿಕೊಂಡಿಲ್ಲ. ಈ ಹುದ್ದೆಗಳನ್ನು ಶೀಘ್ರ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಪುನರ್ ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರ | ನಿಖರತೆ, ಸ್ಪಷ್ಟತೆಯಿರುವ ಬರವಣಿಗೆಯೇ ಜನರ ವಿಶ್ವಾಸ ಗಳಿಸುತ್ತದೆ: ಪ್ರೊ. ಪಿ ಜಿ ತಡಸದ
ಈ ಮುಷ್ಕರದಲ್ಲಿ ಪೌರಕಾರ್ಮಿಕ ಸಂಘಟನೆಯ ಮುಖಂಡ ಶ್ರೀಪಾದ ಜೋಶಿ, ಶಂಕರಗೌಡ ಶಿವಾಜಿ, ಸಿದ್ದಲಿಂಗಯ್ಯ ಚೋಂಡಿ ಪಾಟೀಲ, ಸಿದ್ದು ಕೊಳ್ಳಿ, ಇಬ್ರಾಹಿಂ ಶಾಂತಿ ಮಖಂದಾರ್, ಪ್ರಭು ನಾಲತವಾಡ, ಪ್ರದೀಪ ಶಿವಶರಣ, ಎಸ್ ಡಿ ಪಾಟೀಲ, ಡಿ ಬಿ ಜಾನವೇಕರ್ ಹಾಗೂ ಈ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಅಂಬೇಡ್ಕರ್ ಸೇನೆ ತಾಳಿಕೋಟಿ ಅಧ್ಯಕ್ಷ ಗೋಪಾಲ ಕಟ್ಟಿಮನಿ, ವಾಹನ ಚಾಲಕರು ಇತರರು ಪಾಲ್ಗೊಂಡಿದ್ದರು.