ಕೇಂದ್ರದ ಬಜೆಟ್ನಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ವಿಜಯಪುರ ನಗರ ಸಬಲಾ ಸಂಸ್ಥೆ ಮುಖ್ಯಸ್ಥೆ ಮಲ್ಲಮ್ಮ ಯಳವಾರ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಕರ್ನಾಟಕಕ್ಕೆ ಈ ಬಾರಿ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಇದರಿಂದ ಕರ್ನಾಟಕದ ಜನರಿಗೆ ನಿರಾಶೆಯಾಗಿದೆ. ನಷ್ಟದಲ್ಲಿರುವ ಭದ್ರಾವತಿ ಉಕ್ಕಿನ ಕಾರ್ಖಾನೆಯಂತಹ ಅನೇಕ ಉದ್ದಿಮೆಗಳ ಪುನಶ್ಚೇತನಕ್ಕೆ ಯಾವುದೇ ಯೋಜನೆಯನ್ನು ಘೋಷಿಸದೆ ಇರುವುದು ಬೇಸರ ತಂದಿದೆ” ಎಂದರು.
“ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ₹3.50 ಲಕ್ಷಗಳ ವರೆಗೆ ಸಾಲ ಸೌಲಭ್ಯವನ್ನು ಒದಗಿಸುವುದಾಗಿ ಘೋಷಿಸಲಾಗಿದೆ. ಆದರೆ ರೈತರ ಉತ್ಪಾದನೆಗೆ ಯಾವುದೇ ನಿರ್ದಿಷ್ಟವಾದ ಯೋಜನೆ ರೂಪಿಸದೇ ಇರುವುದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದು ಇನ್ನೂ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ದೇಶದ ಬೆನ್ನೆಲುಬಾಗಿರುವ ಒಕ್ಕಲುತನ ಆರ್ಥಿಕ ಸಂಕಷ್ಟದಿಂದ ಬಳಲುವಂತಾಗುತ್ತದೆ. ಮಹಿಳಾ ಶಿಕ್ಷಣಕ್ಕೆ ಯಾವುದೇ ಹೊಸ ಯೋಜನೆಯನ್ನು ರೂಪಿಸಿಲ್ಲ. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿಲ್ಲ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಆದಾಯ ಮೂಲ ಹೆಚ್ಚಿಸಲು ಸರಿಯಾದ ಯೋಜನೆಯನ್ನು ರೂಪಿಸಲಾಗಿಲ್ಲ. ಹೀಗಾಗಿ ಬಡವರು ಬಡವರಾಗಿಯೇ ಉಳಿಯುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಪರಿಸರ ಕಾಳಜಿ ಕೇವಲ ವಾಟ್ಸಪ್ ಸ್ಟೇಟಸ್‌ಗೆ ಸೀಮಿತವಾಗದಿರಲಿ: ನಟ ವಿಶ್ವಪ್ರಕಾಶ
“ದೇಶದ ಸಾಲ ₹200 ಲಕ್ಷ ಕೋಟಿಗಳಿಗಿಂತಲೂ ಹೆಚ್ಚಾಗಿರುವುದು ದೇಶದ ಪ್ರತಿ ಪ್ರಜೆಗೂ ಆತಂಕವನ್ನು ಹುಟ್ಟಿಸಿದೆ. ಮೂಲ ಶಿಕ್ಷಣಕ್ಕೆ ಒತ್ತು ಕೊಡದೆ ಮೆಡಿಕಲ್ ಸೀಟ್‌ಗಳನ್ನು ಹೆಚ್ಚು ಮಾಡಿದ್ದು, ನಗರದ ಮಕ್ಕಳಿಗಷ್ಟೇ ಹೆಚ್ಚು ಉಪಯುಕ್ತವಾಗಿದೆ. ಗ್ರಾಮೀಣ ಮಕ್ಕಳು ಇದರಿಂದ ವಂಚಿತರಾಗುತ್ತಾರೆ. ಆದರೆ ಇದೆಲ್ಲದರ ನಡುವೆ ಕೇಂದ್ರ ಬಜೆಟ್ 12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದು ಸ್ವಾಗತಾರ್ಹ” ಎಂದರು.
