ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರನೆಂಬರಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತನಿಖೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದೇವರನೆಂಬರಗಿ ಗ್ರಾಮ ಪಂಚಾಯಿತಿ ಸದಸ್ಯ ಜಾಕಿರ್ ಬಸಿರ್ ಸಾಬ್ ಮಣಿಯರ್ ಮಾತನಾಡಿ, “ಗ್ರಾಮ ಪಂಚಾಯತಿಯ 15ನೇ ಹಣಕಾಸಿನ ಅನುದಾನದಲ್ಲಿ 9 ಲಕ್ಷ ರೂ. ದರ್ಬಳಿಕೆಯಾಗಿದೆ. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಕರೆದು ಎಲ್ಲ ಸದಸ್ಯರ ಸಮ್ಮುಖದಲ್ಲಿ ಖರ್ಚು ವೆಚ್ಚದ ಮಾಹಿತಿ ನೀಡಿ ಸಭೆಯ ಅನುಮೋದನೆ ಪಡೆಯದೆ ಯಾವುದೇ ಹಣ ತೆಗೆಯಬೇಡಿ ಎಂದು ಹೇಳಿದಾಗ ಗ್ರಾಮ ಪಂಚಾಯಿತ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ರಾಠೋಡ್ ಅವರು ನಮ್ಮ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಜಾತಿ ನಿಂದನೆ ಹಾಗೂ ಮಾರಣಾಂತಿಕ ಹಲ್ಲೆಯ ದೂರು ದಾಖಲಿಸಿದ್ದಾರೆ” ಎಂದು ಹೇಳಿದರು.
“ಸದರಿ ಅಭಿವೃದ್ಧಿ ಅಧಿಕಾರಿ ಈ ಮೊದಲು ಯಾವ ಯಾವ ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸಿದ್ದರೋ ಅಲ್ಲಿಯೂ ಕೂಡ ಸಾಕಷ್ಟು ಹಗರಣಗಳನ್ನು ಮಾಡಿದ್ದಾರೆ. ಇಂಚಿಗೇರಿ ಗ್ರಾಮ ಪಂಚಾಯಿತಿ, ಚಟ್ನಳ್ಳಿ ಗ್ರಾಮ ಪಂಚಾಯಿತಿಗಳಲ್ಲಿಯೂ ಅಕ್ರಮ ನಡೆಸಿದ್ದಾರೆ. ಹಾಗಾಗಿ ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಸಬೇಕು. ತನಿಖೆ ಮಾಡುವವರೆಗೂ ಅಭಿವೃದ್ಧಿ ಅಧಿಕಾರಿಯನ್ನು ಬೇರೆಡೆ ನಿಯೋಜಿಸಬೇಕು. ತನಿಖೆ ಸಂಪೂರ್ಣವಾದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದೇವರ ಹೆಸರಲ್ಲಿ ಶಾಲೆ ಜಾಗ ಒತ್ತುವರಿ; ತೆರವಿಗೆ ಎಸ್ಎಫ್ಐ ಆಗ್ರಹ
ಒಕ್ಕೂಟದ ಮುಖಂಡರುಗಳಾದ ಎಂ ಎಚ್ ಪಠಾನ್, ಪ್ರದೀಪ್ ಪಾಟಿಲ್, ಆದಿಲ್ ಶಾಹಿ ವಾಲಿಕಾರ್, ಎಂ ಎಸ್ ಕಮತಗಿ, ಮಂಜುನಾಥ್ ಪಾಟಿಲ್, ಕರಿಯಪ್ಪ ಬಸ್ತಾಳ್ ಸೇರಿದಂತೆ ಇತರರು ಇದ್ದರು.