ವಿಜಯಪುರ ನಗರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಗಂಡನ ಇಪಿಎಫ್ ಹಣ ಹಾಕದೆ ವಂಚಿಸಿದ್ದು, ನ್ಯಾಯ ಒದಗಿಬೇಕೆಂದು ಸಂತ್ರಸ್ತ ಮಹಿಳೆಯು ವಿಜಯಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸಂತ್ರಸ್ತ ಮಹಿಳೆ ನೀಲಮ್ಮ(32) ಮೂರು ಮಕ್ಕಳೊಂದಿಗೆ ನಗರದ ಶಾಸ್ತ್ರೀನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬದುಕು ನಡೆಸಲು ಹೈರಾಣಾಗುತ್ತಿದ್ದು, ಮಕ್ಕಳ ಭವಿಷ್ಯಕ್ಕಾಗಿ ಗಂಡನ ಇಪಿಎಫ್ ಹಣ ನೀಡುವಂತೆ ಬೇಡುತ್ತಿದ್ದಾರಾದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಮ್ಮ ನೋವುಗಳನ್ನು ಉಲ್ಲೇಖಿಸಿದ್ದಾರೆ.
“2016ರಿಂದ ಉದ್ಯಾನವನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿವಿಯವರು ನೀಡುತ್ತಿರುವ ಸಂಬಳದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಆದರೆ, ಈ ದುಬಾರಿ ಯುಗದಲ್ಲಿ ಬದುಕು ಸಾಗಿಸುವುದು ತುಂಬಾ ಕಷ್ಟಕರವಾಗಿದೆ” ಎಂದು ಅವಲತ್ತುಕೊಂಡಿದ್ದಾರೆ.
“ನನ್ನ ಗಂಡ ಬಸವರಾಜ ಈ ಹಿಂದೆ ಕರ್ನಾಟಕ ರಾಜ್ಯ ಮಹಿಳಾ ವಿವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ವಿವಿಯ ಕಿರುಕುಳದಿಂದ ಬೇಸತ್ತಿದ್ದರು. ಕರ್ತವ್ಯದಲ್ಲಿರುವಾಗಲೇ 2015ರ ಮಾರ್ಚ್ 30ರಂದು ವಿವಿಯ ಕಾಂಪೌಂಡ್ ಗೋಡೆಗೆ ನೇಣು ಹಾಕಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆಂದು ನಂಬಿಸಿ ನಾನು ಬಂದು ನೋಡುವ ಮುಂಚೆ ಶವವನ್ನು ನಮಗೆ ತೋರಿಸದೇ ಆಸ್ಪತ್ರೆಗೆ ಸಾಗಿಸಿದ್ದರು. ನನ್ನ ಗಂಡನ ಸಾವಿನಲ್ಲಿ ಸರಿಯಾದ ಕ್ರಮವಹಿಸದೆ ಶವವನ್ನು ಹಸ್ತಾಂತರಿಸಿ ತಮ್ಮ ಕೆಲಸ ಮುಗಿಸಿದ್ದಾರೆ” ಎಂದು ಆರೋಪಿಸಿದರು.
ನನ್ನ ಪತಿಯ ಮರಣದ ನಂತರ ನಾನೂ ಕೂಡಾ ಮಹಿಳಾ ವಿವಿಯ ಉದ್ಯಾನವನದ ವಿಭಾಗದಲ್ಲಿ ಕೆಲಸಕ್ಕೆ ಸೇರಿ ಕೆಲಸ ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದೇನೆ. ನನ್ನ ಪತಿಯ ಮರಣದ ಬಳಿಕ ಎಲ್ಲ ಅಗತ್ಯ ದಾಖಲಾತಿಗಳನ್ನು ಕ್ರೋಢೀಕರಿಸಿ ಕಾರ್ಮಿಕ ಭವಿಷ್ಯ ನಿಧಿ ಕ್ಷೇಮಕ್ಕಾಗಿ ಅರ್ಜಿ ಸಲ್ಲಿಸಿದಾಗ ವಿವಿಯ ಹಣಕಾಸು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳು ʼ03 ತಿಂಗಳಲ್ಲಿ ನಿಮ್ಮ ಪತಿಯ ಪಿಎಫ್ ಕ್ಷೇಮ ಆಗಿ ನಿಮಗೆ ಪ್ರತಿ ತಿಂಗಳು ತಿಂಗಳು ಪಿಂಚಣಿ ಬರುತ್ತದೆʼ ಎಂದು ತಿಳಿಸಿದ್ದರು. ನಾನು ಇವರ ಮಾತನ್ನು ನಂಬಿ ಸುಮಾರು 4 ವರ್ಷಗಳವರೆಗೆ ಕಾದು ವಿಚಾರಿಸಿದಾಗ ನಿಮ್ಮ ಅರ್ಜಿಯನ್ನು ಸಲ್ಲಿಸಲಾಗಿದೆ. ಇನ್ನೂ ನಿಮ್ಮ ಖಾತೆಗೆ ಹಣ ಜಮಾ ಮಾಡುವುದೊಂದೇ ಬಾಕಿ ಎಂಬುದಾಗಿ ನಂಬಿಸಿದ್ದರು” ಎಂದು ಹೇಳಿದ್ದಾರೆ.
“ವಿವಿಯವರ ನಡೆಯಿಂದ ಬೇಸತ್ತು ಇವರಿಗೆ ಗೊತ್ತಾಗದೆ ಕಾರ್ಮಿಕ ಭವಿಷ್ಯನಿಧಿ ಪ್ರಾದೇಶಿಕ ಕಚೇರಿ ಕಲಬುರಗಿಯಲ್ಲಿ ವಿಚಾರಿಸಿದಾಗ ನಿಮ್ಮ ಪತಿಯ ಖಾತೆಯಲ್ಲಿ ಯಾವುದೇ ಹಣ ಇರುವದಿಲ್ಲ ಹಾಗೂ ಮರಣದ ಕ್ಷೇಮಕ್ಕಾಗಿ ಯಾವುದೇ ಅರ್ಜಿಯೂ ಸಲ್ಲಿಕೆಯಾಗಿರುವದಿಲ್ಲವೆಂದು ತಿಳಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿವಿಯ ಎಸ್‌ಸಿ/ಎಸ್‌ಟಿ ನೌಕರ ಸಂಘದ ಪದಾಧಿಕಾರಿ ಸುಭಾಷ್ ಕಾಂಬಳೆ ಹಾಗೂ ಹಣಕಾಸು ವಿಭಾಗದ ಅಧಿಕಾರಿಗಳನ್ನು ವಿಚಾರಿಸಿದಾಗ ಇವರೆಲ್ಲರೂ ಸೇರಿ ನನ್ನು ಬಾಯಿಗೆ ಬಂದಂತೆ ನಿಣದಿಸಿದ್ದು, ʼನಮ್ಮನ್ನು ಕೇಳದೆ ನೀನು ಕ್ಷೇಮ ವಿಚಾರವಾಗಿ ಯಾರನ್ನೂ ಕೂಡಾ ವಿಚಾರಿಸಕೂಡದು. ಒಂದು ವೇಳೆ ನಮ್ಮ ಗಮನಕ್ಕೆ ತರದೆ ನೀನು ವಿಚಾರಿಸಿದರೆ ನಿನ್ನನ್ನು ಕುಲಪತಿಗಳಿಗೆ ಹೇಳಿ ಕೆಲಸದಿಂದ ತೆಗೆದು ಹಾಕುತ್ತೇವೆಂದುʼ ಬೆದರಿಕೆ ಹಾಕಿದ್ದಾರೆ” ಎಂದರು.
“ನಾನು ಈ ವಿಷಯವಾಗಿ ದಲಿತ ಸಂಘಟನೆಗಳನ್ನು ಸಂಪರ್ಕ ಮಾಡಿದ್ದರಿಂದ ಮಹಿಳಾ ವಿವಿಯ ಕುಲಪತಿ ಹಾಗೂ ಕುಲಸಚಿವರು ಕಾರ್ಯಾಲಯದ ಸಿಬ್ಬಂದಿ ಮತ್ತು ಹಣಕಾಸು ವಿಭಾಗದ ಸಿಬ್ಬಂದಿಗಳು, ʼನಿನ್ನ ಪತಿಯ ಪಿಎಫ್ ಕ್ಲೈಮ್ ಮಾಡುವುದಿಲ್ಲ ನೀನು ಸಂಘಟನೆಗಳಿಂದಲೇ ನಿನ್ನ ಕೆಲಸ ಮಾಡಿಸಿಕೋ, ನಾವು ನಿನಗೆ ಯಾವುದೇ ಸಹಾಯ ಮಾಡುವುದಿಲ್ಲʼವೆಂದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಇತ್ತೀಚೆಗೆ ವಿವಿಯ ಸಿಬ್ಬಂದಿ ಶ್ರೀಶೈಲ್ ದೊಡ್ಡಮನಿ, ನನ್ನ ವಿರುದ್ಧ ಲೈಂಗಿಕ ದೌರ್ಜನವೆಸಗಿದ್ದು, ಜಾತಿ ನಿಂದನೆ ಮಾಡಿದ್ದಾರೆ. ಈ ವಿಷಯವಾಗಿ ವಿವಿಯ ಆಂತರಿಕ ದೂರುಗಳ ಸಮಿತಿಗೆ ಇದೇ ಫೆಬ್ರವರಿ 14ರಂದು ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಆಂತರಿಕ ದೂರು ಸಮಿತಿಯವರು ʼನೀನೊಂದು ಹೆಣ್ಣು, ಹಾಗಾಗಿ ಗಂಡಿನ ಸಂಪರ್ಕವನ್ನು ಸಹಿಸಿಕೋʼ ಎಂಬುದಾಗಿ ಸಲಹೆ ನೀಡಿದ್ದು, ಆರೋಪಿಯನ್ನು ರಕ್ಷಿಸುವ ಕೆಲಸ ನಡೆಸುತ್ತಿದ್ದಾರೆ. ಇಂತಹ ನಡೆಗಳಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಸಮಾಜದಲ್ಲಿ ನನ್ನ ಮಕ್ಕಳೊಂದಿಗೆ ಬದುಕುವುದು ಕಷ್ಟವೆನಿಸುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಾಹೀರಾತು ಬಿತ್ತರಿಸಿ: ರಾಜಕೀಯ ಪಕ್ಷಗಳಿಗೆ ಸೂಚನೆ
“ನನ್ನ ಪತಿಗೆ ಬರಬೇಕಾದ ಪಿಎಫ್ ಹಣವು ಬಂದಿದ್ದೇ ಆದಲ್ಲಿ, ಅದರಿಂದ ನನ್ನ ಮಕ್ಕಳ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಹುದಾಗಿದೆ. ಆದ್ದರಿಂದ ತಾವು ಮಹಿಳಾ ವಿವಿಯ ಹಣಕಾಸು ವಿಭಾಗ ಹಾಗೂ ಎಸ್‌ಸಿ/ಎಸ್‌ಟಿ ನೌಕರ ಸಂಘದ ಪದಾಧಿಕಾರಿ ಸುಭಾಷ್ ಕಾಂಬಳೆ ನಡೆಯಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದೇನೆ. ಆದ್ದರಿಂದ ತಾವು ದಲಿತ ಮಹಿಳೆ, ವಿಧವೆಯ ಹಾಗೂ ಸಂತ್ರಸ್ತೆಯಾಗಿರುವ ನನಗೆ ನ್ಯಾಯ ಒದಗಿಸಿಕೊಡಬೇಕು” ಎಂದು ಕಳಕಳಿಯ ವಿನಂತಿ ಮಾಡಿದ್ದಾರೆ.
