ಡಾ. ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಅಡಿಪಾಯಗಳನ್ನು ದೇಶದ ಅಭಿವೃದ್ಧಿಗೆ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯವಾಗಿದೆ ಎಂದು ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಹೇಳಿದ್ದಾರೆ.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಅಂಬೇಡ್ಕರ್ ಅವರು ಶೋಷಣೆಯ ವಿರುದ್ಧ ತಮ್ಮ ಜೀವನದುದ್ದಕ್ಕೂ ಹೋರಾಡಿದಂತವರು. ತಮ್ಮ ಮುಂದಿನ ಜನಾಂಗ ಕಷ್ಟ ಪಡಬಾರದೆಂದು ಆನೇಕ ಹೋರಾಟಗಳನ್ನು ಎದುರಿಸಿದರು. ದುರಂತವೆಂದರೆ, ಇಲ್ಲಿಯವರೆಗೂ ಅಂಬೇಡ್ಕರ್ ಕಂಡ ಸಮಾನತೆಯ ಸುಸ್ಥಿರ ಭಾರತವನ್ನು ನಿರ್ಮಿಸಲು ಸಾಧ್ಯವಾಗಿಲ್ಲ” ಎಂದರು.
ವಿಶ್ವವಿದ್ಯಾಲಯಗಳು ಅವರ ಆಶಯಗಳನ್ನು ನೆರವೇರಿಸುವಲ್ಲಿ ಶಿಕ್ಷಣ ಮತ್ತು ಸಂಶೋಧನೆಗಳ ಮೂಲಕ ಪ್ರಮುಖ ಪಾತ್ರ ವಹಿಸುವುದು ತುರ್ತಾಗಿದೆ ಮತ್ತು ಸಮಾಜದ ಅಭಿವೃದ್ಧಿಗೆ ಶಿಕ್ಷಣದ ಪ್ರಾಮುಖ್ಯತೆ ಬಹಳಷ್ಟಿದೆ. ಪ್ರಜ್ಞಾವಂತ ಪ್ರಜೆಗಳು ದೇಶದ ಅಭಿವೃದ್ಧಿಗೆ ಸಹಾಯಕಾರಿ ಎಂದು ತಿಳಿಸಿದ ಅಂಬೇಡ್ಕರ್ ಎಂತಹ ಶಿಕ್ಷಣವನ್ನು ನೀಡಬೇಕು ಎಂಬುದನ್ನು ವಿವರಿಸಿದ್ದು ಮತ್ತು ತಾಂತ್ರಿಕ ಶಿಕ್ಷಣದ ಅವಶ್ಯಕತೆಯ ಬಗ್ಗೆ ವಿವರವಾಗಿ ಪ್ರತಿಪಾದಿಸಿದ್ದಾರೆ ಎಂದುರು.
ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸೂಕ್ತವಾದ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಜ್ಞಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಜ್ಞಾನ ಅತ್ಯಂತ ಪವಿತ್ರ ಮತ್ತು ಅವಶ್ಯಕವಾಗಿದೆ. ಎಲ್ಲರೂ ಸತತ ಅಧ್ಯಯನದ ಮೂಲಕ ಉನ್ನತ ಜ್ಞಾನವನ್ನು ಪಡೆದುಕೊಳ್ಳಬೇಕು. ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗಗಳನ್ನು ಅನುಸರಿಸುವುದರ ಮೂಲಕ ನಮ್ಮ ಜೀವನವನ್ನು ಅತ್ಯುತ್ತಮಗೊಳಿಸಿಕೊಳ್ಳಬೇಕಾಗಿದೆ. ನಡುರಾತ್ರಿಯಲ್ಲಿ ದಲಿತರ ಪರವಾಗಿ ಚಿಂತನೆ ನಡೆಸುತ್ತಾ ಎಲ್ಲರ ಅಭಿವೃದ್ಧಿಗೆ ಶ್ರಮಿಸಿದ ಬಾಬಾಸಾಹೇಬರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಲಾವತಿ ಕಾಂಬ್ಳೆ ಸ್ವಾಗತಿಸಿದರು, ಪ/ಪ ಪಂಗಡದ ನಿರ್ದೇಶಕಿ ಪ್ರೊ. ಲಕ್ಷ್ಮೀದೇವಿ ವೈ ವಂದಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.