ಮಹಿಳೆಯರು ಮೌಢ್ಯದಿಂದ ಹೊರಬಂದು ಶಿಕ್ಷಣವಂತರಾಗಬೇಕು, ಕಾನೂನು ಅರಿತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಸ್ಪೂರ್ತಿ ಸಿಂದಗಿ ತಾಲೂಕು ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ನಾವು ಆರಂಭದಿಂದಲೂ ಸಾಕಷ್ಟು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುತ್ತಾ ಬಂದಿದ್ದೇವೆ. ಇಂದು ಕೂಡಾ ಮೌಢ್ಯತೆಯಿಂದ ಹೊರಬಂದು ಶಿಕ್ಷಣವಂತರಾಗಬೇಕು. ತೊಂದರೆಯಾದಲ್ಲಿ ನೇರವಾಗಿ ಪೊಲೀಸರಿಗೆ ಭೇಟಿ ಮಾಡಿ. ಕಷ್ಟಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವಲ್ಲಿ ಇಲಾಖೆಗಳು ಎಂದೂ ಮುಂದಿರುತ್ತವೆ. ಕಾನೂನನ್ನು ಅರಿತು ಸಮಾಜದಲ್ಲಿ ಸದೃಢರಾಗಿ ಬಾಳಿ” ಎಂದು ಹೇಳಿದರು.

ಇನ್ನರ್ ವಿಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಮಾತನಾಡಿ, “ವರ್ಷವಿಡೀ ಮಹಿಳಾ ದಿನಾಚರಣೆ ಮಾಡಬೇಕು. ಎಲ್ಲಿ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಅಲ್ಲಿ ನ್ಯಾಯ ಒದಗಿಸುವ ಕಾರ್ಯವಾಗಬೇಕು. ಸಾಧನೆ ಮಾಡಿದ ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕು. ಸ್ಥಳೀಯ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಮಹಿಳೆಯರಿಗೆ ಸ್ಪೂರ್ತಿದಾಯಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ” ಎಂದರು.
ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ, ವಿಜಯಪುರದ ಜೆಜ್ವಟ್ ಮುಖ್ಯಸ್ಥ ಫ್ಯಾನ್ಸಿಸ್ ಮಿನಜಸ್ ಎಸ್. ಜಿ, ಸಂಗಮ ಸಂಸ್ಥೆಯ ನಿರ್ದೇಶಕರಾದ ಸಂತೋಷ, ಸಿಂತಿಯ ಡಿ ಮೆಲ್ಲೋ, ಮಮತಾ, ಎನ್ ಆರ್ ಎಲ್ ಎಂ ಯೋಜನೆ ಮೇಲ್ವಿಚಾರಕಿ ಲಕ್ಷ್ಮಿ ಪೊಲೀಸ ಪಾಟೀಲ, ಮಹಿಳಾ ಮೇಲ್ವಿಚಾರಕಿ ಸುನಿತ ಕಪ್ಪೆನವರ, ಡಾ. ಎನ್ ಎಂ ಮೊಘಲಾಯಿ, ಸಿಂಧೂ ತಾಯಿ ಮಾಜಿ ದೇವದಾಸಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಸರೀತ ಹರಿಜನ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ರಾಜಶೇಖರ ಕೋಚ್ಬಾಳ, ಸಿಂದಗಿಯ ಮಹಿಳಾ ಸಾಂತ್ವಾನ ಕೇಂದ್ರ ನಿರ್ದೇಶಕಿ ಸುಜಾತ ಕಲಬುರ್ಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೆಕೆ ಚೌಹಾಣ್, ಮಹಾನಂದ್ ಬೊಮ್ಮಣ್ಣಿ ವೇದಿಕೆಯಲ್ಲಿದ್ದರು.
ಇದನ್ನೂ ಓದಿ: ವಿಜಯಪುರ | ಮೌಢ್ಯ ಬಿಡಿ; ವೈಜ್ಞಾನಿಕವಾಗಿ ಪರಾಮರ್ಶಿಸಿ: ಎಸ್ ಕುಮಾರ್
ತಾಲೂಕಿನ ವಿವಿಧ ಗ್ರಾಮಗಳ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ಭಾಗವಹಿಸಿದ್ದರು. ಮಹಿಳೆಯರು ಸಿದ್ಧಪಡಿಸಿದ ವಸ್ತುಗಳನ್ನು ಪ್ರದರ್ಶಿಸಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಚೌಡೇಶ್ವರಿ ಕಲ್ಯಾಣ ಮಂಟಪದವರೆಗೆ ಮಹಿಳಾ ಜಾಗೃತಿ ಜಾಥಾ ಜರುಗಿತು.
