ಪಟಾಕಿಗಳ ಮಾರಾಟಕ್ಕೆ ಪರವಾನಗಿ ಪಡೆಯದೆ ಅನಧಿಕೃತವಾಗಿ ತೆರೆದಿರುವ ಪಟಾಕಿ ಅಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಕಾರ್ಯಕರ್ತರು ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
“ಪಟಾಕಿ ಮಳಿಗೆಗಳನ್ನು ತೆರೆಯಲು ಸರ್ಕಾರ ನಿರ್ದಿಷ್ಟವಾದ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ಜಿಲ್ಲಾದ್ಯಂತ ಯಾವುದೇ ರೀತಿಯ ಪರವಾನಗಿ ಪಡೆಯದೆ ಜನಸಂದಣಿ ಹೆಚ್ಚಾಗಿರುವ ಪ್ರದೇಶದಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಪಟಾಕಿ ಮಳಿಗೆ ತೆರೆಯಲು ಜಿಲ್ಲಾಧಿಕಾರಿಯಿಂದ ಸ್ಫೋಟಕ ಪರವಾನಗಿ, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪತ್ರ, ಸ್ಥಳೀಯ ಸಂಸ್ಥೆಗಳ ಜನರಲ್ ಲೈಸೆನ್ಸ್ ಸೇರಿದಂತೆ ಮುಂತಾದ ಅನುಮತಿ ಪತ್ರಗಳನ್ನು ಪಡೆದುಕೊಂಡು ಜನಸಂದಣಿ ಇಲ್ಲದ, ಅಗ್ನಿ ಅವಘಡಗಳು ಸಂಭವಿಸಿದಾಗ ಹೆಚ್ಚು ಹಾನಿಯಾಗದ ಪ್ರದೇಶಗಳಲ್ಲಿ ಸುರಕ್ಷತೆಯಿಂದ ಮಳಿಗೆಗಳನ್ನು ತೆಗೆಯಲು ಮತ್ತು ವ್ಯಾಪಾರ ವಹಿವಾಟುಗಳು ಮಾಡಲು ಅವಕಾಶವಿರುತ್ತದೆ” ಎಂದರು.
“ಕೆಲವು ಪಟಾಕಿ ಮಾರಾಟಗಾರರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪೋಲಿಸ್ ಇಲಾಖೆ ಮತ್ತು ಅಗ್ನಿಶಾಮಕ ಅಧಿಕಾರಿಗಳಿಗೆ ತಿಂಗಳುವಾರು ಹಫ್ತಾ ನೀಡುವುದರ ಮೂಲಕ ಅನಧಿಕೃತ ಅಂಗಡಿಗಳ ಮಾಲೀಕರು ವರ್ಷಪೂರ್ತಿ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ನಿಯಮದ ಪ್ರಕಾರ ಜಿಲ್ಲಾಧಿಕಾರಿಯವರು ಹಬ್ಬ, ನಾಡ ಉತ್ಸವಗಳಲ್ಲಿ ಎರಡು ದಿನಗಳು ಮಾತ್ರ ಮಳಿಗೆಗಳನ್ನು ತೆರೆಯಲು ಅವಕಾಶವನ್ನು ನೀಡುತ್ತಾರೆ. ಆದ್ದರಿಂದಾಗಿ ಈ ಕೂಡಲೇ ತಮ್ಮ ಇಲಾಖೆಯ ರಾಜಶ್ವ ನಿರೀಕ್ಷಕರ ನೇತೃತ್ವದಲ್ಲಿ ಒಂದು ಟಾಸ್ಕ್ ಫೋರ್ಸ್ ತಂಡವನ್ನು ರಚಿಸಿ ಅನಧಿಕೃತ ಅಂಗಡಿಗಳನ್ನು ಬಂದ್ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಸ್ಪೋಟಕ ಪರವಾನಗಿ ಇಲ್ಲದೆ ಅನಧಿಕೃತ ಮಳಿಗೆಗಳಲ್ಲಿ ವ್ಯವಹಾರ ನಡೆಸುತ್ತಿವೆ. ಇದನ್ನು ತಡೆಗಟ್ಟಬೇಕೆಂದು 2022ರಲ್ಲಿ ಮನವಿ ಸಲ್ಲಿಸಿದ್ದೆವು. ಆದರೆ ಅಧಿಕಾರಿಗಳು ತಮ್ಮ ಲಂಚಬಾಕ ಆಮಿಷಗಳಿಂದ ಅನಧಿಕೃತವಾಗಿ ಪಟಾಕಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರು. ಇದರಿಂದಾಗಿ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಅತ್ತಿಬೆಲೆಯಲ್ಲಿ ಬೆಂಕಿ ಅವಘಡದಿಂದ ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 13 ಮಂದಿ ಕಾರ್ಮಿಕರು ಸಜೀವ ದಹನವಾಗಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಖಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹ; ಸಿಎಂ ಭೇಟಿ ಮಾಡಿದ ಎಸ್ಎಫ್ಐ ನಿಯೋಗ
“ವಿಜಯಪುರ ಜಿಲ್ಲೆಯಲ್ಲಿ ಆ ರೀತಿಯ ಪ್ರಕರಣಗಳು ನಡೆಯಬಾರದೆಂಬ ಮುಂಜಾಗೃತೆ ವಹಿಸಬೇಕೆಂದು ತಮ್ಮ ಗಮನಕ್ಕೆ ತಂದಿದ್ದು, ತಾವು ಕ್ರಮ ಕೈಗೊಳ್ಳುತ್ತೀರೆಂದು ಭಾವಿಸಿದ್ದೇವೆ” ಎಂದು ಹೇಳಿದರು.
ರಾಜ್ಯ ಸಂಘಟನೆ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ರಾಕೇಶ ಇಂಗಳಗಿ, ಅಮೀದ ಇನಾಮ್ದಾರ್, ಪ್ರವೀಣ ಕನಸೆ, ವಿಕ್ರಮ ವಾಗ್ಮೊರೆ ಮತ್ತು ಶ್ರೀಶೈಲ ಮಠ ಇದ್ದರು.