ಕವಿ ದಾರ್ಶನಿಕರನ್ನು ಮೀರಿದ ಜ್ಞಾನಿ ವಾಲ್ಮೀಕಿ. ಅವರನ್ನು ಜಾತಿಯಿಂದಲ್ಲ ನೀತಿಯಿಂದ ನೋಡಬೇಕಿದೆ ಎಂದು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಗೋಪಾಲ್ ಎನ್ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ‘ಪ್ರಸ್ತುತ ಸಾಮಾಜಿಕ ನೆಲೆಯಲ್ಲಿ ವಾಲ್ಮೀಕಿ ರಾಮಾಯಣʼ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ವರ್ಣಾಶ್ರಮದ ಕಾಲಘಟ್ಟದಲ್ಲಿ ತನ್ನ ಅಪಾರವಾದ ಜ್ಞಾನದಿಂದ ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಮೇಧಾವಿ ವಾಲ್ಮೀಕಿ ರಾಮಾಯಣದ ಪ್ರತಿಯೊಂದು ಪದದಲ್ಲಿಯೂ ವಿಶೇಷವಾದ ಅರ್ಥವಿದೆ. ಅದನ್ನು ಅರಿತುಕೊಂಡಾಗ ಮಾತ್ರ ವಾಲ್ಮೀಕಿಯ ಜ್ಞಾನದ ನಿಜವಾದ ಪರಿಚಯವಾಗುತ್ತದೆ. ನಾವು ಮನಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ. ಎಂಬುದನ್ನು ರಾಮಾಯಣ ನಮಗೆ ತೋರಿಸಿಕೊಡುತ್ತದೆ” ಎಂದು ಹೇಳಿದರು.
“ರಾಮಾಯಣ ಕೇವಲ ಮನುಷ್ಯರನ್ನಷ್ಟೇ ಒಳಗೊಂಡಿಲ್ಲ. ಪ್ರಾಣಿ, ಪಕ್ಷಿ, ಮರಗಿಡಗಳು, ಪರಿಸರ ಎಲ್ಲವನ್ನೂ ಒಳಗೊಂಡಿದೆ. ಅಲ್ಲಿ ಪ್ರಜಾಪ್ರಭುತ್ವ, ಆಡಳಿತ, ಸಮಾನತೆ, ಸ್ತ್ರೀವಾದ, ಭ್ರಾತೃತ್ವ ಹೀಗೆ ಎಲ್ಲದರ ಪರಿಕಲ್ಪನೆಯಿದೆ” ಎಂದು ಅಭಿಪ್ರಾಯಪಟ್ಟರು.
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಎಸ್ ಸೋಮನಾಳ ಮಾತನಾಡಿ, “ಮಹರ್ಷಿ ವಾಲ್ಮೀಕಿಯವರ ರಾಮಾಯಣದ ಜೀವನ ಮೌಲ್ಯಗಳನ್ನು ನಾವು ಪಾಲನೆ ಮಾಡಬೇಕಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಬಿ ಕೆ ತುಳಸಿಮಾಲ ಮಾತನಾಡಿ, “ರಾಮಾಯಣ ಇಂದು ಹಲವು ಆವತರಣಿಕೆಗಳನ್ನು ಕಂಡಿದೆ. ಆದರೂ ಅದರ ಮೂಲತತ್ವ ಹಾಗೇ ಉಳಿದುಕೊಂಡಿದೆ. ರಾಮಾಯಣವು ನೋಡುವವರ ದೃಷ್ಟಿಕೋನವನ್ನು ಅವಲಂಭಿಸಿದೆ. ನಾವು ಯಾವ ಮನಸ್ಥಿತಿಯಿಂದ ಅದನ್ನು ವಿಶ್ಲೇಷಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಕಾಂಗ್ರೆಸ್-ಬಿಜೆಪಿ ರಾಜಕೀಯ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಲಿ: ದಸಂಸ ಆಗ್ರಹ
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ/ಪಂಗಡ ಘಟಕದ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಎಚ್ ಎಂ ಚಂದ್ರಶೇಖರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಇದ್ದರು.