ಕುರುಬರಿಗೆ ಎಸ್‌ಟಿ(ಪರಿಶಿಷ್ಟ ಪಂಗಡ) ಮೀಸಲಾತಿಯನ್ನು ಕಲ್ಪಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ನಿಂತು ಎಸ್‌ಟಿ ಮೀಸಲಾತಿ ಕೇಳುವ ಗಟ್ಟಿ ಧ್ವನಿ, ಧೈರ್ಯ ಯಾರಲ್ಲೂ ಇಲ್ಲ. ಬರಿ ಜೈ ಎನ್ನುವುದು, ಶಾಲು, ಹಾರ ಹಾಕಿ ಸನ್ಮಾನಿಸುವುದರಿಂದ ಏನೂ ಪ್ರಯೋಜನವಾಗದು. ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿ ಎಂದು ಕೇಳುವ ಧೈರ್ಯ ಸಮಾಜದವರಲ್ಲಿ ಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮಾದರಿ ಕಲ್ಯಾಣ ಮಂಟಪದಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು.
“ನನಗೆ ಸಮಾಜದ ವಿಷಯ ಬಂದಾಗ ಯಾವ ಪಕ್ಷ, ಪಂಗಡ ಸಂಬಂಧವಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಅದನ್ನು ವಾಪಸ್ ಕಳುಹಿಸಿದಾಗ ಮತ್ತೆ ಸಿದ್ದರಾಮಯ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ಬಳಿ ಕುರುಬರಿಗೆ ಎಸ್‌ಟಿ ಮೀಸಲಾತಿ ಏಕೆ ಆಗಲಿಲ್ಲವೆಂದು ಸಿದ್ದರಾಮಯ್ಯ ಕೇಳಬೇಕಾಗಿದೆ” ಎಂದು ಹೇಳಿದರು.
“ನಾವು ಕುರುಬರು, ನಮಗೆ ಯಾವುದೇ ಎಂಪಿ, ಎಂಎಲ್‌ಎ ಆಗುವುದು ಬೇಡ. ಮೊದಲು ಕುರುಬರು ಎಸ್‌ಟಿ ಮೀಸಲು ಅಡಿ ಸೇರ್ಪಡೆಯಾಗಬೇಕು” ಎಂದು ಕೆಪಿಎಸ್‌ಸಿ ಮಾಜಿ ಸದಸ್ಯರೊಬ್ಬರು ಹೇಳಿದರು.
ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಮಾತನಾಡಿ, “ಕುರುಬರಿಗೆ ಎಸ್‌ಟಿ ಮೀಸಲಾತಿಗಾಗಿ ಜನಾಂದೋಲನ ಮಾಡುವ ಅಗತ್ಯವಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ದೇಶಕ್ಕೆ ಬರಹಗಾರರ ಕೊಡುಗೆ ಅನನ್ಯ
ಸಿದ್ದನ ಕೊಳ್ಳದ ಶಿವಕುಮಾರ ಸ್ವಾಮೀಜಿ, ಸರೂರ ಹಾಲುಮತ ಗುರುಪೀಠದ ಶಾಂತಮಯ ಶ್ರೀ ಸಂಗೊಳ್ಳಿ ರಾಯಣ್ಣ ವೇದಿಕೆ ಸಂಚಾಲಕ ಪರಮೇಶ ಮಾತಿನ್, ಮುಖಂಡ ಮಂಜುನಾಥ ಲಕ್ಕವಳ್ಳಿ, ವಕೀಲ ಎಚ್ ವೈ ಪಾಟೀಲ, ಶಿಲ್ಪ ಕುದರಗೊಂಡ ಮಾತನಾಡಿದರು.
ಮುಖಂಡರಾದ ಎಸ್ ಎಸ್ ಹುಲ್ಲೂರ, ಸಿದ್ದಣ್ಣ ಮೇಟಿ, ನೀಲಮ್ಮ ಮೇಟಿ, ವಕೀಲರಾದ ಪಿಬಿ ಗೌಡರ, ಬಿಜಿ ಜಗ್ಗಲ, ಬಿ ವೈ ಮೇಟಿ, ರೇವತಿ ಬೂದಿಹಾಳ, ಪಂಚಮಸಾಲಿ ಸಮಾಜದ ಕಾಶಿಬಾಯಿ ರಾಂಪುರ, ಜೆಡಿಎಸ್ ಮುಖಂಡ ಬಸನಗೌಡ ಪಾಟೀಲ ಇದ್ದರು.