ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಸುದ್ದಿಯಿಂದ ಆಘಾತವಾಗಿದೆ.
ನಮ್ಮ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಅಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕದಿಂದ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಎಎಪಿ ಮನವಿ ಸಲ್ಲಿಸಿದ್ದು, “ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಮಾದರಿ ನೀತಿ ಸಂಹಿತೆ ಅಸ್ತಿತ್ವದಲ್ಲಿದ್ದರೆ, ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗೆ ನೇರವಾಗಿ ಅಡ್ಡಿಪಡಿಸುವ ಐಟಿ, ಸಿಬಿಐ ಮತ್ತು ಇ.ಡಿಯಂತಹ ಸರ್ಕಾರಿ ಇಲಾಖೆಗಳಿಗೆ ಇದೇ ನೀತಿ ಸಂಹಿತೆ ಏಕೆ ಅನ್ವಯಿಸುವುದಿಲ್ಲ? ಪ್ರಮುಖ ಸ್ಥಳಗಳಲ್ಲಿ ಪ್ರತಿಪಕ್ಷಗಳು ತನ್ನ ಕೈಕಾಲುಗಳನ್ನು ಕಟ್ಟಿಕೊಂಡು ಚುನಾವಣೆಗೆ ಹೋಗುವುದನ್ನು ತಪ್ಪಿಸಲು ಈ ಕುತಂತ್ರ ನಡೆದಿದೆ” ಎಂದು ಆರೋಪಿಸಿದರು.
“ಸಂವಿಧಾನದ ಮೂಲ ರಚನೆಯಲ್ಲಿ ಅಡಗಿರುವ ಪ್ರಜಾಸತ್ತಾತ್ಮಕ ತತ್ವಗಳ ಈ ದ್ರೋಹವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳವಂತೆ ನಾವು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸುತ್ತೇವೆ. ತಪ್ಪು ಮಾಡಿದ್ದರೂ ತನಿಖೆ ನಡೆಸಬಾರದೆಂದು ನಾವು ಹೇಳುತ್ತಿಲ್ಲ. ಆದರೆ ಈ ಘಟನೆಯು ಚುನಾವಣೆಗೆ ಸಂಬಂಧಿಸಿದಂತಿದೆ. ಐಟಿ ಮತ್ತು ಇ.ಡಿ ಈ ಎರಡು ವಿಷಯಗಳ ತನಿಖೆಗೆ ಇಷ್ಟು ಸಮಯ ತೆಗೆದುಕೊಳ್ಳಬಹುದಾದರೆ, ಚುನಾವಣೆ ಮುಗಿಯಲು ಇನ್ನು ಎರಡು ತಿಂಗಳ ಕಾಲ ಏಕೆ ಕಾಯಬಾರದು” ಎಂದು ಪ್ರಶ್ನಿಸಿದರು.
“ದೇಶದಲ್ಲಿ ತುರ್ತು ಪರಿಸ್ಥಿತಿ ಬಂದಿರುವಂತೆ ಭಾಸವಾಗುತ್ತಿದೆ. ಅರವಿಂದ ಕೇಜ್ರಿವಾಲ್ ಬಂಧನವಾಗಿದ್ದಾರೆ. ಸತ್ಯೇಂದ್ರ ಜೈನ್, ಸಂಜಯ್ ಸಿಂಗ್, ಸಿಸೋಡಿಯ, ಹೇಮಂತ್ ಸುರೇನ್ ಬಂಧನ ಆಗಿದ್ದಾರೆ. ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿಪಕ್ಷಗಳ ನಾಯಕರ ವಿರುದ್ಧ ಇ.ಡಿ, ಸಿಬಿಐ ಛೂ ಬಿಟ್ಟಿದ್ದಾರೆ. ಚುನಾವಣೆ ಆಯುಕ್ತರೂ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಚುನಾವಣೆ ಬಾಂಡ್ ಹಗರಣ ತನಿಖೆ ನಡೆಯುತ್ತಿಲ್ಲ. ಈ ಎಲ್ಲ ಬೆಳವಣಿಗೆಗಳು ಕಂಡರೆ ತುರ್ತು ಪರಿಸ್ಥಿತಿ ಅಲ್ಲದೆ ಮತ್ತೇನು” ಎಂದು ಕಿಡಿಕಾರಿದ್ದಾರೆ.
“ಪ್ರತಿಪಕ್ಷದಲ್ಲಿದ್ದಾಗ ಹಗರಣ ಮಾಡಿದವರ ಮೇಲೆ ಇ.ಡಿ, ಐಟಿ ದಾಳಿ ನಡೆಸುತ್ತಾರೆ. ಅದೇ ಅವರು ಬಿಜೆಪಿ ಪಕ್ಷಕ್ಕೆ ಸೇರಿದೊಡನೆ ಹಗರಣ ಮುಕ್ತರಾಗುತ್ತಾರೆ. ಇದು ಆಡಳಿತರೂಢ ಬಿಜೆಪಿ ಪಕ್ಷ ದೇಶದ ಸ್ವಯಕ್ತತೆ ಸಂಸ್ಥೆಗಳನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ” ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಚುನಾವಣಾ ಬಾಂಡ್ ಹಗರಣ; ಮೋದಿ ʼಭ್ರಷ್ಟ ಗುರುʼ ಎಂಬುದು ಬಯಲಾಗಿದೆ: ಪಾಟೀಲ್ ಗಣಿಹಾರ್
ಅಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೊಲ್ಲಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ, ಜಿಲ್ಲಾ ಮಾಧ್ಯಮ ಉಸ್ತುವಾರಿ ಸಂಜು ಸೇಟಗಾರ, ಜಿಲ್ಲಾ ಕಾರ್ಯದರ್ಶಿ ಅಪ್ಪನಗೌಡ್ ಕೆ ಪಾಟೀಲ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷಡ ಅನ್ನಪೂರ್ಣ ಬೆಳ್ಳನ್ನವರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಬಾಬು ಬಿಜಾಪುರ, ಅವಿನಾಶ ಐಹೊಳೆ, ನಗರ ಉಪಾಧ್ಯಕ್ಷ ಅಮೀರ್ ಸೋಹೈಲ್ ಪಟೇಲ್, ನಗರ ಪ್ರಧಾನ ಕಾರ್ಯದರ್ಶಿ ಮೀರಸಾಬ ದಳವಾಯಿ, ನಗರ ಕಾರ್ಯದರ್ಶಿ ಜ್ಯೋತಿಬಾ ಹೊನ್ನಕಲಶೆ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಇಂದ್ರಜಿತ್ ಜಾದವ್, ಪಕ್ಷದ ಮುಖಂಡರುಗಳಾದ ಶಬ್ಬೀರ್ ಪಟೇಲ್ ಸೇರಿದಂತೆ ಇತರರು ಇದ್ದರು.
