ಸಾಹಿತ್ಯ ಪ್ರತಿಯೊಬ್ಬರಿಗೂ ಆತ್ಮ ಚಿಂತನೆ ಮಾಡಲು ಪ್ರೇರೇಪಿಸುವ ಹಾಗೂ ಸಹಜ ಮಾನವ ಪ್ರೀತಿಯನ್ನು ಹೆಚ್ಚಿಸಿ, ಸಮಾನತೆಯನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ ಎಂದು ಸಿಂದಗಿಯ ಗಜಲ್ ಸಾಹಿತಿ ಮೆಹಬೂಬಸಾಬ್ ವೈ ಜೆ ಹೇಳಿದರು.
ಪ್ರಭಾವತಿ ಎಸ್. ದೇಸಾಯಿ ಅವರ ‘ಒಲವ ಹಾಯಿದೋಣಿ’ ಗಜಲ್ ಕೃತಿಯನ್ನು ಪರಿಚಯಿಸಿ ಮಾತನಾಡಿ, ‘ಸಾಹಿತ್ಯ ಪ್ರತಿಯೊಬ್ಬರಿಗೂ ಆತ್ಮ ಚಿಂತನೆ ಮಾಡಲು ಪ್ರೇರೇಪಿಸುವ ಹಾಗೂ ಸಹಜ ಮಾನವ ಪ್ರೀತಿಯನ್ನು ಹೆಚ್ಚಿಸಿ, ಸಮಾನತೆಯನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ. ಸಾಹಿತ್ಯದ ಪ್ರತಿಯೊಂದು ವಾಕ್ಯವೂ ಜನಾನುಸಂಧಾನವಿಲ್ಲದೆ ಬದುಕಲಾರದು. ಗಜಲ್ ಕಾವ್ಯವನ್ನು ಆರಾಧನೆಯ ರೂಪದಲ್ಲಿ ಸ್ವೀಕರಿಸಿದ್ದು ಸಾಂಸ್ಕೃತಿಕವಾಗಿ ಮಹತ್ವದ ಸ್ಥಾನ ಪಡೆದುಕೊಂಡಿದೆ’ ಎಂದರು.
ನಗರದ ಹಂಚಿನಾಳ ಬಡಾವಣೆಯಲ್ಲಿ ರಾಜೇಂದ್ರ ಕುಮಾರ್ ಬಿರಾದಾರ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಮಾಸಿಕ ಸಾಹಿತ್ಯಗೋಷ್ಠಿ ‘ಓದುಗರ ಚಾವಡಿ’ ಉದ್ಘಾಟಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಮಾತನಾಡಿ, ಆದಿಕಾಲದಿಂದ ಕನ್ನಡ ಸಾಹಿತ್ಯ ವಿಶಾಲ ಮತ್ತು ವಿಫಲವಾಗಿ ಬೆಳೆಯುತ್ತಾ ಬಂದಿದ್ದು, ಸತ್ವಯುತ ವಾದ ಮತ್ತು ಸಂಪದ್ಭರಿತ ಕಾವ್ಯ ಹಾಗೂ ಮಹಾಕಾವ್ಯಗಳ ಅದ್ಭುತ ಪ್ರಯೋಗ ಕನ್ನಡ ಸಾಹಿತ್ಯದಲ್ಲಿ ನಡೆದಿದೆ ಎಂದರು.
ಇಂದಿನ ವಿಮರ್ಶೆಯು ಶಾಸ್ತ್ರೀಯ ಅವಧಿಯಷ್ಟು ಹಿಂದೆಯೇ ಅಸ್ತಿತ್ವದಲ್ಲಿತ್ತು. ಬಸವ ಪುರಾಣ, ಹರಿಹರ ರಗಳೆ, ದಲಿತ-ಬಂಡಾಯ, ಸ್ತ್ರೀ-ಸಂವೇದನೆ, ಸಮಾನತೆ, ಸ್ವಾತಂತ್ರ್ಯ ಇವು ದೇಶ ಹಾಗೂ ವ್ಯಕ್ತಿ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿರುವ ಕನ್ನಡ ಸಾಹಿತ್ಯದ ಸೇವೆ ಶ್ಲಾಘನೆ ವ್ಯಕ್ತಪಡಿಸಿದರು.
ಧಾರವಾಡ ಕೃಷಿ ಮಹಾವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಮಾಜಿ ಸದಸ್ಯ ಸುರೇಶ ಗುಣಸಗಿ, ಓದುಗರ ಚಾವಡಿ ಬಳಗದ ಅಧ್ಯಕ್ಷ ಶರಣು ಸಬರದ, ಓದುಗರ ಚಾವಡಿಯ ಗೌರವ ಅಧ್ಯಕ್ಷ ಬನಸೋಡೆ, ಪಾರ್ವತಿ ಕುರ್ಲೆ, ಗುರುಬಸಯ್ಯ ಜ್ಯೋತಿ ರಾಜಕುಮಾರ ಉಪಸ್ಥಿತರಿದ್ದರು.