ಭಾರತ ದೇಶದ ಪ್ರಜೆಗಳು ಇದೀಗ ನಡೆಯಲಿರುವ 17ನೇ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಮುಂದಿನ ಐದು ವರ್ಷ ಕಾಲ ಆಳಲಿರುವ ಸರ್ಕಾರವನ್ನು ಆಯ್ಕೆ ಮಾಡಲು ಸಜ್ಜಾಗಿ ನಿಂತಿದ್ದಾರೆ. ಕಳೆದ 77 ವರ್ಷ ಕಾಲದಲ್ಲಿ, 16 ಬಾರಿ ವೋಟು ಹಾಕಿ ಸರ್ಕಾರಗಳನ್ನು ರಚಿಸಿರುವ ನಾವು ಇಂದು ಎಲ್ಲಿದ್ದೇವೆ? ನಮ್ಮ ಬದುಕಿನಲ್ಲಿ ಏನಾದರೂ ಪ್ರಗತಿ ಆಗಿದೆಯೇ? ಎಂಬುದನ್ನು ಅರಿಯಬೇಕಿದೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಕಲ್ಲಪ್ಪ ರಾಮಚಂದ್ರ ತೊರವಿ ಹೇಳಿದರು.
ವಿಜಯಪುರದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿ, “ದೇಶದ ಯುವಜನತೆಯು ಹಿಂದೆಂದಿಗಿಂತಲೂ ಇಲ್ಲದಂತಹ ಹೆಚ್ಚಿನ ನಿರುದ್ಯೋಗವನ್ನು ಇಂದು ಎದುರಿಸುತ್ತಿದೆ. ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಷನ್ ನೀಡಿರುವ ‘ದಿ ಇಂಡಿಯ ಎಂಪ್ಲಾಯ್‌ಮೆಂಟ್ ರಿಪೋರ್ಟ್ 2024ರ ಪ್ರಕಾರ ‘ಭಾರತದ 83% ಯುವಜನತೆಯು (7.8 ದಶಲಕ್ಷ) ನಿರುದ್ಯೋಗಿಗಳಾಗಿದ್ದಾರೆ. ಕಾಂಗ್ರೆಸ್ ಸರ್ಕಾರವು ಆರಂಭಿಸಿದ ಖಾಸಗೀಕರಣವನ್ನು ತೀವ್ರಗೊಳಿಸಿದ ಬಿಜೆಪಿಯಿಂದಾಗಿ ಸಾರ್ವಜನಿಕ ಉದ್ದಿಮೆಗಳು ಬಂದ್ ಆದುದರ ಪರಿಣಾಮವಿದು. ಅಂತೆಯೇ, ಶಿಕ್ಷಣವು ಶೇ.70ಕ್ಕಿಂತ ಹೆಚ್ಚಾಗಿ, ಶ್ರೀಮಂತರ ಹಿಡಿತದಲ್ಲಿ ಸಿಕ್ಕಿಬಿದ್ದಿದೆ” ಎಂದು ಹೇಳಿದರು.
“ಸರ್ಕಾರಿ ಶಾಲೆ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳೂ ಕೂಡ ಖಾಸಗಿ ಸಂಸ್ಥೆಗಳಂತೆ ವ್ಯಾಪಾರಿ ಕೇಂದ್ರಗಳಾಗುತ್ತಿವೆ. ವಿದ್ಯಾರ್ಥಿ ನಿಲಯಗಳು ಸರ್ಕಾರದ ಅನುದಾನವಿಲ್ಲದೆ ಸೊರಗಿವೆ. ಎಸ್‌ಸಿ/ಎಸ್‌ಟಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಇಳಿಮುಖವಾಗಿಲ್ಲ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯವೂ ಎಗ್ಗಿಲ್ಲದೆ ನಡೆಯುತ್ತಲಿದೆ. ದೌರ್ಜನ್ಯಕೋರ ದುರುಳರು ಕಾನೂನು ಮತ್ತು ಪೊಲೀಸರ ಭಯವಿಲ್ಲದೆ ರಾಜಾರೋಷದಿಂದ ತಿರುಗಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸರ್ಕಾರಿ ಆಸ್ಪತ್ರೆಗಳು ಕನಿಷ್ಟ ಸೌಲಭ್ಯಗಳಿಲ್ಲದೆ ಬಡರೋಗಿಗಳ ಪಾಲಿಗೆ ಮೃತ್ಯುಕೂಪಗಳಾಗಿದ್ದರೆ, ಖಾಸಗಿ ಆಸ್ಪತ್ರೆಗಳು ಎಲ್ಲೆಡೆ ನಾಯಿಕೊಡೆಗಳಂತೆ ಹಬ್ಬಿರುವ ವ್ಯಾಪಾರದ ಅಂಗಡಿಗಳಾಗಿವೆ. ಸಣ್ಣಪುಟ್ಟ ರೈತರು ತಮ್ಮ ಬೆಳೆಗಳಿಗೆ ಕನಿಷ್ಟ ಬೆಲೆ ಕೋರಿ, ಬೀದಿಯಲ್ಲಿ ನಿಂತು ಹೋರಾಡುತ್ತಿದ್ದರೆ, ಕೃಷಿಕಾರ್ಮಿಕರು ಭೂಹೀನರಾಗಿ ಕೂಲಿಗಾಗಿ, ಕೂಳಿಗಾಗಿ ಹತಾಶೆಯಿಂದ ಊರೂರು ಅಲೆಯುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳೂ ಕೂಡಾ ಗಗನಕ್ಕೇರಿರುವ ಕಾರಣ ಮೇಲ್ಜಾತಿಯವರನ್ನೂ ಒಳಗೊಂಡಂತೆ ಎಲ್ಲ ಬಡವರು ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ” ಎಂದರು.
“ಅಪೌಷ್ಟಿಕತೆಯಿಂದ ನರಳುವ ಮತ್ತು ಸಾಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹಾಗಾದರೆ, ಇಲ್ಲಿಯತನಕ ಈ ಸರ್ಕಾರಗಳು ಮಾಡಿದ್ದಾದರೂ ಏನು? ಮನುವಾದಿಗಳ ಈ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ನಮಗೆ ವಿಶೇಷ ಜ್ಞಾನವೇನು ಬೇಕಿಲ್ಲ. ಆದಕಾರಣ ಎಲ್ಲ ಭಾರತೀಯರೂ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಲು ತಾವೆಲ್ಲರೂ ಬಿಎಸ್‌ಪಿಯ ಅಭ್ಯರ್ಥಿಯಾದ ತನ್ನನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಲೋಕಸಭಾ ಕ್ಷೇತ್ರ | ಮೊದಲ ದಿನ ಐದು ಮಂದಿ ಅಭ್ಯರ್ಥಿಗಳಿಂದ ಆರು ನಾಮಪತ್ರ ಸಲ್ಲಿಕೆ
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಮುನಿಯಪ್ಪ, ಡಾ. ದಸ್ತಗಿರಿ ಮುಲ್ಲಾ, ಯಶವಂತ ಪೂಜಾರಿ, ಸುರೇಶ್ ಚೋರಿ, ಜಿಲ್ಲಾಧ್ಯಕ್ಷ ಬೊಮ್ಮನಜೋಗಿ, ರಾಜು ಗುಬ್ಬೇವಾಡ, ಕಾಶಿನಾಥ್ ದೊಡ್ಡಮನಿ, ಚಂದ್ರಶೇಖರ ಜೇವೂರ, ಸಂಜಯ್ ಚಲವಾದಿ, ರಮೇಶ ಅರಗೋಳಿ, ಚಂದ್ರಕಾಂತ ಕಾಂಬಳೆ , ದಯಾನಂದ ಪಿರಾಗ್ ಸೇರಿದಂತೆ ಇತರರು ಇದ್ದರು.
