ಮೌಲಾನಾ ಅಬುಲ್ ಕಲಾಂ ಆಜ಼ಾದ್ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಮರುರೂಪಿಸಲು ಕಂಕಣ ಬದ್ಧರಾಗಿದ್ದರು. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದರು ಎಂದು ನಾಲತವಾಡ ಉರ್ದು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎ ಎಚ್ ಖಾಜಿ ಹೇಳಿದರು.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ಜರಗಿದ ಮೌಲಾನಾ ಅಬುಲ್ ಕಲಾಂ ಆಜ಼ಾದ್ ಹಾಗೂ ವೀರವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
“ಆಧುನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದ ಶ್ರೇಯಸ್ಸು ಮೌಲಾನಾ ಅಬುಲ್ ಕಲಾಂ ಆಜ಼ಾದ್ ಅವರಿಗೆ ಸಲ್ಲುತ್ತದೆ” ಎಂದು ತಿಳಿಸಿದರು.
ಶಿಕ್ಷಕಿ ಜುಲೇಖಾಬೇಗಂ ಮುಲ್ಲಾ ಮಾತನಾಡಿ, “ಹೆಣ್ಣುಮಕ್ಕಳ ಶಿಕ್ಷಣ ಮತ್ತು 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣಕ್ಕೆ ಒತ್ತು ನೀಡಿದ ಆಜ಼ಾದ್ ಅವರು ತಮ್ಮ ನೇತೃತ್ವದಲ್ಲಿ ಶಿಕ್ಷಣ ಸಚಿವಾಲಯುವು ದೇಶದ ಮೊದಲ ಐಐಟಿಯನ್ನು 1951ರಲ್ಲಿ ಸ್ಥಾಪಿಸಿತ್ತು. ನಂತರ 1953 ರಲ್ಲಿ ವಿಶ್ವವಿದ್ಯಾನಿಲಯ ಅನುದಾನ ಆಯೋಗವನ್ನು (ಯುಜಿಸಿ) ರಚಿಸಿದರು” ಎಂದು ತಿಳಿಸಿದರು.
“ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಸ್ಥಾಪಿಸುವ ಮೂಲಕ ಶಿಕ್ಷಣ ವ್ಯವಸ್ಥೆಗೆ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ( ಐಸಿಸಿಆರ್), ಸಾಹಿತ್ಯ ಅಕಾಡೆಮಿ, ಲಲಿತ ಕಲಾ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿ, ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್‌ನಂತಹ ಭಾರತದ ಸಾಂಸ್ಕೃತಿಕ ಸಂಸ್ಥೆಗಳಿಗೆ ಅವರು ಕೊಡುಗೆ ನೀಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರಾಜ್ಯದ ಜನತೆ ಟಿಪ್ಪು ಸುಲ್ತಾನ್ ಜಯಂತಿ ಹಬ್ಬದಂತೆ ಆಚರಿಸಬೇಕು : ಮಲ್ಲಿಕಾರ್ಜುನ ನೆಲೋಗಿ
ಶಮಶಾದಬೇಗಂ ಸಿಕ್ಕಲಗಾರ ಓಬವ್ವನ ಜೀವನ ಸಾಧನೆಯ ಬಗ್ಗೆ ಮಾತನಾಡಿದರು. ಮಕ್ಕಳು ಓಬವ್ವ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ವೇಷದಲ್ಲಿ ಎಲ್ಲರ ಗಮನ ಸೆಳೆದರು.
ಈ ವೇಳೆ ಶಿಕ್ಷಕರುಗಳಾದ ಎಂ ಎಂ ಇಸ್ಲಾಂಪೂರ, ಜೆ ಎಂ ಮುಲ್ಲಾ, ಹಾಶಿಂಬಿ ನದಾಫ, ಎ ಎ ಮುಲ್ಲಾ, ಜೆ ಎಂ ಮೂಲಿಮನಿ ಇದ್ದರು.