ಉತ್ತರಾಖಂಡ ಉತ್ತರಕಾಶಿಯ ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿದ್ದ ಬಳಿಕ ಸುರಕ್ಷಿತವಾಗಿ ಹೊರಬಂದ ಘಟನೆ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇಂಥದ್ದೇ ಘಟನೆ ನೆನಪಿಸುವಂತಹ ಘಟನೆಯೊಂದು ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ವಿಜಯಪುರ ತಾಲೂಕಿನ ಅಲಿಯಾಬಾದ್ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಸ್ ಕಂಪನಿಯ ಮೆಕ್ಕೆಜೋಳ ಸಂಗ್ರಹಿಸಿಡುತ್ತಿದ್ದ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಫುಡ್ ಪ್ರೊಸೆಸಿಂಗ್ ಯುನಿಟ್ ಯಂತ್ರ ಸಮೇತ 480 ಟನ್ ಮೆಕ್ಕೆಜೋಳದ ಮೂಟೆಗಳು ಬಿದ್ದಿವೆ. ಪರಿಣಾಮ ಎಂಟು ಮಂದಿ ಕಾರ್ಮಿಕರು ಅದರೊಳಗೆ ಸಿಲುಕಿಕೊಂಡು, ಜೀವನ್ಮರಣ ಹೋರಾಟ ನಡೆಸಿದ್ದರು. ಈ ಪೈಕಿ ಏಳು ಮಂದಿ ಶವವಾಗಿ ಪತ್ತೆಯಾಗಿದ್ದಾರೆ.
#WATCH | Karnataka: More than 10 workers trapped under sacks filled with grains after a storage unit collapsed at a warehouse in Vijaypura. More details awaited. (04.12) pic.twitter.com/URhUBw5m5o
— ANI (@ANI) December 4, 2023
ಬಿಹಾರ ಮೂಲದ ಗುಲಾರ್ ಚಂದ್ (50), ಕೃಷ್ಣಕುಮಾರ್ (22), ರಾಮ್ ಬಾಲಕ್ (52), ಲುಖೋ ಜಾಧವ್(45), ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ(29), ಸಂಬೂ ಮುಖಿಯಾ (26) ಮೃತ ಕಾರ್ಮಿಕರು.
ಘಟನೆಯಲ್ಲಿ ಕಾರ್ಮಿಕರಾದ ಸೋನು ಕರಾಮಚಂದ್, ರವೀಶ್ ಕುಮಾರ್, ಅನಿಲ್, ಕಲ್ಮೇಶ್ವರ್ ಮುಕಿಯ, ಕಿಶೋರ್ ಹಜಾರಿಮಲ್ ಜೈನ್, ಪ್ರಕಾಶ್ ಧುಮಗೊಂಡ ಎಂಬುವವರು ಗಾಯಗೊಂಡಿದ್ದಾರೆ.
ದುರ್ಘಟನೆಯ ಬಗ್ಗೆ ಮಾಹಿತಿ ನೀಡಿರುವ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ‘8 ಜನ ಕಾರ್ಮಿಕರಲ್ಲಿ 7 ಜನ ಕಾರ್ಮಿಕರು ಸಾವನ್ನಪ್ಪಿದ್ದು, ಏಳು ಜನರ ಮೃತದೇಹವನ್ನು ರಕ್ಷಣಾ ಕಾರ್ಯಾಚರಣೆಯ ತಂಡ ಹೊರಕ್ಕೆ ತೆಗೆದಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದೆ. ಮುನ್ನೆಚ್ಚರಿಕೆಯಾಗಿ ಘಟಕದಡಿ ರಕ್ಷಣಾ ಸಿಬ್ಬಂದಿ ಶೋಧ ನಡೆಸಲಿದ್ದಾರೆ’ ಎಂದು ತಿಳಿಸಿದ್ದಾರೆ.
‘ಓರ್ವನನ್ನು ನಿನ್ನೆ ರಕ್ಷಣೆ ಮಾಡಲಾಗಿತ್ತು. ಘಟನೆ ನಡೆದ ವೇಳೆಯೇ ತಕ್ಷಣ ಮೂವರು ಕಾರ್ಮಿಕರು ಬಚಾವ್ ಆಗಿದ್ದರು. ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗಿದೆ. ಘಟನೆಯ ಸಂಬಂಧ ರಾಜಗುರು ಫುಡ್ ಮಾಲೀಕ ಕಿಶೋರ್, ಸೂಪರ್ ವೈಸರ್ ಪ್ರವೀಣ್ ಚಂದ್ರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಹಾಗೂ ಯಂತ್ರೋಪಕರಣ ದುರಸ್ತಿ ಇದೆ ಅಂತಾ ಗೊತ್ತಿದ್ದರೂ ಕೂಡಾ ನಿರ್ಲಕ್ಷ್ಯತನ ತೋರಿರುವ ಹಿನ್ನೆಲೆಯಲ್ಲಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಸಚಿವ ಎಂ ಬಿ ಪಾಟೀಲ್ ಭೇಟಿ
ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿದ್ದ ಸಚಿವ ಎಂ ಬಿ ಪಾಟೀಲ್ ಸೋಮವಾರ ಸಂಜೆ ನಡೆದ ಈ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ತಡರಾತ್ರಿ ವಿಜಯಪುರ ನಗರಕ್ಕೆ ದೌಡಾಯಿಸಿದರು. ಅಲ್ಲದೇ, ಘಟನಾ ಸ್ಥಳಕ್ಕೆ ತೆರಳಿ ಮಧ್ಯರಾತ್ರಿ ಬಹಳ ಹೊತ್ತಿನವರೆಗೂ ರಕ್ಷಣಾ ಕಾರ್ಯಾಚರಣೆ ಪರಿಶೀಲನೆ ನಡೆಸಿದರು.
ವಿಜಯಪುರ ನಗರದ ಹೊರವಲಯದ ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ರಾಜಗುರು ಮೆಕ್ಕೆಜೋಳ ಸಂಸ್ಕರಣೆ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ ಕಾರ್ಮಿಕರು ಸಿಲುಕಿರುವ ಘಟನಾ ಸ್ಥಳಕ್ಕೆ ನಿನ್ನೆ ರಾತ್ರಿ ಭೇಟಿನೀಡಿ ರಕ್ಷಣಾ ಕಾರ್ಯ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದೆ. pic.twitter.com/QWn8JDNd01
— M B Patil (@MBPatil) December 5, 2023
ಘಟನೆಯ ಕುರಿತು ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್‌ಪಿ ಋಷಿಕೇಶ ಸೋನಾವಣೆ, ಜಿ.ಪಂ. ಸಿಇಓ ರಾಹುಲ ಶಿಂಧೆ ಅವರಿಂದ ಘಟನೆ ಮತ್ತು ನಂತರ ಕೈಗೊಳ್ಳಲಾದ ರಕ್ಷಣಾ ಕಾರ್ಯಾಚರಣೆಯ ಕುರಿತು ಸಂಪೂರ್ಣ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸೇರಿದ್ದ ಉಳಿದ ಕಾರ್ಮಿಕರೊಂದಿಗೆ ಮಾತನಾಡಿದ ಸಚಿವರು, “ಈ ಅವಘಡದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಮೆಕ್ಕೆಜೋಳದ ರಾಶಿಯಡಿ ಸಿಲುಕಿರುವ ಎಲ್ಲ ಕಾರ್ಮಿಕರ ಶವಗಳನ್ನು ಹೊರತೆಗೆದು ಶವ ಪರೀಕ್ಷೆಯ ಬಳಿಕ ಅವರ ಮೂಲ ರಾಜ್ಯವಾದ ಬಿಹಾರಕ್ಕೆ ಗೌರವಪೂರಕವಾಗಿ ಕಳುಹಿಸಿ ಕೊಡಲಾಗುವುದು. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ” ಎಂದು ಸಾಂತ್ವನ ಹೇಳಿದರು.
ಈ ದುರ್ಘಟನೆಯಲ್ಲಿ ಸಾವಿಗೀಡಾದ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು. ಇದರ ಜೊತೆಗೆ ರಾಜಗುರು ಇಂಡಸ್ಟ್ರಿಯ ಮಾಲೀಕರಿಂದಲೂ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಸರಕಾರದಿಂದ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಕಾರ್ಮಿಕರಿಗೆ ಭರವಸೆ ನೀಡಿದರು.