ವಿಜಯಪುರ ಜಿಲ್ಲೆಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಮಹಿಳೆಯೊಬ್ಬಳು ತನ್ನ ನಾಲ್ವರು ಮಕ್ಕಳೊಂದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ನಾಲ್ವರು ಮಕ್ಕಳು ಸಾವಿಗೀಡಾಗಿದ್ದಾರೆ. ಮಹಿಳೆಯನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಸೋಮವಾರ ನಡೆದಿದೆ.
ಸಾವಿಗೀಡಾದವರನ್ನು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತ್ರಿ(5), ರಕ್ಷಾ ನಿಂಗರಾಜ ಭಜಂತ್ರಿ(3) ಹಾಗೂ ಅವಳಿ ಮಕ್ಕಳಾದ ಹಸೇನ ನಿಂಗರಾಜ ಭಜಂತ್ರಿ, ಹುಸೇನ ನಿಂಗರಾಜ ಭಜಂತ್ರಿ(13 ತಿಂಗಳು) ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹದಿಂದ ನೊಂದ ಮಹಿಳೆ ಭಾಗ್ಯ ಎಂಬುವವರು ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ಬಳಿಕ ತಾನೂ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಮೀನುಗಾರರು ತಾಯಿಯನ್ನು ಕಾಲುವೆಯಿಂದ ಎತ್ತಿ ಬದುಕಿಸಿದ್ದಾರೆ. ಸ್ಥಳದಲ್ಲಿ ಸಂಬಂಧಿಗಳ ರೋಧನೆ ಮುಗಿಲು ಮಟ್ಟಿದೆ.
ಘಟನೆ ಹಿನ್ನೆಲೆ
ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಲಿಂಗರಾಜ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈ ಸಾಲವನ್ನು ತೀರಿಸಲು ಆಸ್ತಿ ಮಾರಾಟ ಮಾಡಲು ಚಿಂತನೆ ನಡೆಸಿದ್ದ. ಹೀಗಾಗಿ ತನ್ನ ಪಿತ್ರಾರ್ಜಿತ ಆಸ್ತಿ ಪಾಲು ಕೇಳಿದ್ದ. ಸಾಲ ತೀರಿಸಲು ತಂದೆಯ ಪಿತ್ರಾರ್ಜಿತ ಆಸ್ತಿಯ ಪಾಲು ಕೇಳಿದ್ದ. ಆದೆ, ಆಸ್ತಿಪಾಲಿನ ವಿಚಾರವಾಗಿ ನಿಂಗರಾಜ ಸಹೋದರರು ತಂದೆಯ ಜೊತೆ ಜಗಳವಾಡಿದ್ದಾರೆ. ಇದೇ ವಿಚಾರವಾಗಿ ಕಳೆದ ಹಲವಾರು ದಿನಗಳಿಂದ ಮನೆಯಲ್ಲಿ ಜಗಳ ಆಗಿತ್ತು ಎನ್ನಲಾಗಿದೆ.
ತಂದೆ ತಾಯಿ ಇರುವರೆಗೂ ಆಸ್ತಿಯಲ್ಲಿ ಪಾಲು ನೀಡುವುದಿಲ್ಲವೆಂದು ನಿಂಗರಾಜ ಸಹೋದರರು ಜಗಳ ಮಾಡಿದ್ದರು. ಇದರಿಂದ ನಿಂಗರಾಜ ತೀವ್ರವಾಗಿ ನೊಂದಿದ್ದ. ಈ ಕಾರಣಕ್ಕಾಗಿ ಪತ್ನಿ ಭಾಗ್ಯಶ್ರೀ ಹಾಗೂ ಲಿಂಗರಾಜ ಮಧ್ಯೆ ಜಗಳವಾಗುತ್ತಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗುಡಿಸಲು ತೆರವುಗೊಳಿಸುವ ಮುನ್ನ ಬಡಜನರಿಗೆ ಪುನರ್ವಸತಿ ಕಲ್ಪಿಸಬೇಕು: ಸಿಪಿಐಎಂಎಲ್
ಬನದ ಹುಣ್ಣಿಮೆ ಇದ್ದ ಕಾರಣ ನಿಂಗರಾಜ, ಹೆಂಡತಿ ಮಕ್ಕಳೊಂದಿಗೆ ನಿಡಗುಂದಿ ತಾಲೂಕಿನ ಎಲ್ಲಮ್ಮನ ಬೂದಿಹಾಳ ಗ್ರಾಮಕ್ಕೆ ಎಲ್ಲಮ್ಮನ ದರ್ಶನಕ್ಕೆ ಕುಟುಂಬ ಸಹಿತ ತೆರಳುತ್ತಿದ್ದ. ದುರದೃಷ್ಟವಶಾತ್ ಆಲಮಟ್ಟಿ ಎಡದಂಡೆ ಕಾಲುವೆ ಬಳಿ ನಿಂಗರಾಜನ ಬೈಕ್ ಪೆಟ್ರೋಲ್ ಖಾಲಿಯಾಗಿತ್ತು. ಬಳಿಕ ನಿಂಗರಾಜ, ಮಕ್ಕಳು ಹಾಗೂ ಪತ್ನಿಯನ್ನು ಕೆನಾಲ್ ಬಳಿ ನಿಲ್ಲಿಸಿ ಪೆಟ್ರೋಲ್ ತರಲು ಹೋಗಿದ್ದ. ವಾಪಸ್ ಬರುವಷ್ಟರಲ್ಲಿ ಭಾಗ್ಯಶ್ರೀ ತನ್ನ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾನೂ ಸಹ ಜಿಗಿದಿದ್ದಳು ಎಂದು ತಿಳಿದುಬಂದಿದೆ.
ಭಾಗ್ಯಶ್ರೀ ಕಾಲುವೆಗೆ ಜಿಗಿದಿದ್ದನ್ನು ಕಂಡ ಮೀನುಗಾರರು, ಆಕೆಯನ್ನು ರಕ್ಷಿಸಿ ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಕಾಲುವೆ ಬಳಿ ಇಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ ಎನ್ನಲಾಗಿದೆ.