ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪ್ರಮುಖ ಮಾರುಕಟ್ಟೆಯಲ್ಲಿನ ಪಟ್ಟಣ ಪಂಚಾಯಿತಿಯ ಆರು ವಾಣಿಜ್ಯ ಮಳಿಗೆಗಳು ಶಿಥಿಲಗೊಂಡು ನಿರುಪಯುಕ್ತವಾಗಿದ್ದು, ಪಪಂಗೆ ಬಾಡಿಗೆ ರೂಪದಲ್ಲಿ ಬರುವ ಆದಾಯ ಕೈಜಾರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಹಲವಾರು ವರ್ಷಗಳಿಂದ ಶಿಥಿಲಗೊಂಡು ನರಳುತ್ತಿರುವ ವಾಣಿಜ್ಯ ಮಳಿಗೆಗಳನ್ನು ಇಲ್ಲಿಯವರೆಗೂ ದುರಸ್ತಿಗೊಳಿಸುವ ಮನಸ್ಸು ಪಪಂ ಮಾಡಿಲ್ಲ. ಈ ಹಿಂದೆ ಪ್ರತಿ ವರ್ಷವೂ ವಾಣಿಜ್ಯ ಮಾಳಿಗೆ ಒಂದಕ್ಕೆ ಹರಾಜಿನಲ್ಲಿ ವರ್ಷಕ್ಕೆ 1.50 ರಿಂದ ಎರಡು ಲಕ್ಷ ರೂಗೆ ನೀಡಲಾಗುತ್ತಿತ್ತು. ಸದ್ಯ 6 ಮಳೆಗಳು ನಿರುಪಯುಕ್ತವಾಗಿದ್ದು, ವಾರ್ಷಿಕ ಬಾಡಿಗೆ ಅಂದಾಜು 10 ಲಕ್ಷ ರೂಪಾಯಿಗಳಷ್ಟು ಆದಾಯ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

ಅಭಿವೃದ್ಧಿಗೆ ಮುಂದಾಗಲಿ
ವಿಜಯಪುರ ಜಿಲ್ಲೆ ಸೇರಿದಂತೆ ನಾಲತವಾಡ ಪಟ್ಟಣ ತೀವ್ರ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಅಲ್ಲದೆ, ರಾಜಸ್ಥಾನ ಮೂಲದ ವ್ಯಾಪಾರಿಗಳು ಮತ್ತು ಸ್ಥಳೀಯವಾಗಿ ಬಟ್ಟೆ, ಕಿರಾಣಿ, ಎಲೆಕ್ಟ್ರಿಕ್ ಸೇರಿದಂತೆ ಹೋಟೆಲ್ ನಡೆಸುವ ವ್ಯಾಪಾರಿಗಳು ಕೂಡ ಹೆಚ್ಚಾಗುತ್ತಿದ್ದಾರೆ. ಆದರೆ, ಪಟ್ಟಣದಲ್ಲಿ ಸ್ಥಳದ ಅಭಾವವಿದೆ. ಹಾಗೆಯೇ ವಾಣಿಜ್ಯ ಮಳಿಗೆಗಳಿಗೂ ಭಾರೀ ಬೇಡಿಕೆ ಇದೆ. ಸದ್ಯ ಮಳಿಗೆಗಳಿಲ್ಲದೆ ಮುಖ್ಯ ಮಾರುಕಟ್ಟೆಯಲ್ಲಿ ಸಿಕ್ಕಸಿಕ್ಕ ಸ್ಥಳಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ನಡೆಸುತ್ತಿದ್ದಾರೆ. ಹಣ್ಣಿನ ವ್ಯಾಪಾರಸ್ಥರು, ಹೊಟೇಲ್‌ಗಳು, ಹಡತಿ ಅಂಗಡಿಯವರು ಸಹ ಮಳಿಗೆಗಳಿಗಾಗಿ ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ವ್ಯಾಪಾರಕ್ಕೆ ಸ್ಥಳದ ಅಭಾವ ತಪ್ಪಿಸುವ ನಿಟ್ಟಿನಲ್ಲಿ ಶಿಥಿಲಗೊಂಡ ವಾಣಿಜ್ಯ ಮಳಿಗೆಗಳಿಗೆ ಪಪಂ ಮರು ಜೀವ ನೀಡಬೇಕಿದೆ.
ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ನಾಲತವಾಡ ಪಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಇಲಕಲ್, ‘ಜಿಲ್ಲಾಧಿಕಾರಿಗಳಿಗೆ ಮಳಿಗೆಯನ್ನು ಮರು ನಿರ್ಮಾಣ ಮಾಡುವಂತೆ ಪ್ರಸ್ತಾವನೆ ಕೊಟ್ಟಿದ್ದೇವೆ. ಶಾಸಕ ಸಿ ಎಸ್ ನಾಡಗೌಡ ಅವರು ಅನುದಾನ ಕೊಡುವ ಭರವಸೆ ನೀಡಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ಹೊಟೇಲ್ ಉದ್ಯಮಿ ಶರಣಪ್ಪ ಮುಂದಿನ ಮನೆ ಮಾತನಾಡಿ, ‘ಹಲವು ವರ್ಷ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳಲ್ಲಿ ಉದ್ಯಮ ನಡೆಸಿದ್ದೇನೆ. ಸದ್ಯ ಮಳಿಗೆಗಳು ಶಿಥಿಲಗೊಂಡಿದ್ದರಿಂದ ಹಲವಾರು ಕಡೆ ಹೊಟೇಲ್ ನಡೆಸಿ, ವರ್ಷಕ್ಕೊಮ್ಮೆ ಸ್ಥಳ ಬದಲಿಸುವ ಸ್ಥಿತಿ ಎದುರಾಗಿದೆ. ಪಪಂ ಹಳೆಯ ಮಳಿಗೆಗಳನ್ನು ದುರಸ್ತಿ ಮಾಡಬೇಕು. ಈಗ ಇರುವ 2 ನೂತನ ಮಳಿಗೆಗಳನ್ನು ಹರಾಜು ಮಾಡಿ ಅನುಕೂಲ ಕಲ್ಪಿಸಿಕೊಡಿ’ ಎಂದು ತಮ್ಮ ಅಳಲು ತೋಡಿಕೊಂಡರು.
ರೈತ ಸಂಘಟನೆಯ ಯುವ ನಾಯಕ ಶಿವಾನಂದ ಗೌಂದಿ ಮಾತನಾಡಿ, ‘ಬೀದಿ ಬದಿ ವ್ಯಾಪಾರಸ್ಥರಿಗೆ ಜಾಗದ ಕೊರತೆ ತುಂಬಾ ಇದೆ. ಇದನ್ನು ಮನಗಂಡು ಪಂಚಾಯತಿಯವರು ಕೈ ಚೆಲ್ಲಿ ಕುಂತಿದ್ದಾರೆ. ಇದರ ವಿರುದ್ಧ ಹಲವು ಬಾರಿ ಬೀದಿಬದಿ ವ್ಯಾಪಾರಸ್ಥರನ್ನು ಕರೆದುಕೊಂಡು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಭೇಟಿ ನೀಡಿದ್ದೇವೆ. ಆದರೆ ಇಲ್ಲಿಯವರೆಗೂ ಯಾವುದೇ ಕೆಲಸವಾಗಿಲ್ಲ’ ಎಂದರು.
ಇದನ್ನು ಓದಿದ್ದೀರಾ? ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯ: ಕೆಪಿಎಸ್‌ಸಿ ಫಲಿತಾಂಶ ತಡೆಯುವಂತೆ ಸಿಎಂಗೆ ಸಾಹಿತಿ ಬರಗೂರು ಪತ್ರ
ಈ ವಿಷಯದ ಕುರಿತು ಈ ದಿನ ಪ್ರತಿನಿಧಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗೆ ಕರೆ ಮಾಡಿ ಮಾತನಾಡಿಸಿದಾಗ, ಸಮಸ್ಯೆ ನಮ್ಮ ಗಮನಕ್ಕೆ ಇದೆ. ಶಾಸಕರ ಗಮನಕ್ಕೂ ತಂದಿದ್ದೇವೆ. ಶೀಘ್ರದಲ್ಲೇ ಮಳಿಗೆಗಳನ್ನು ಧ್ವಂಸ ಮಾಡಿ ಹೊಸ ಮಳಿಗೆಗಳನ್ನು ಕಟ್ಟುವ ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.
ಇನ್ನಾದರೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಬೀದಿ ಬದಿ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಒದಗಿಸುವ ಮತ್ತು ಶಿಥಿಲಗೊಂಡಿರುವ ವಾಣಿಜ್ಯ ಮಳಿಗೆಗೆ ಮುಕ್ತಿ ನೀಡಿ, ಹೊಸ ಕಟ್ಟಡ ಕಟ್ಟಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
