ವಿಜಯಪುರ ಮಹಾನಗರ ಪಾಲಿಕೆಯ 22ನೇ ಅವಧಿಗೆ ಕಳೆದ ಜನವರಿ, ಫೆಬ್ರವರಿ ತಿಂಗಳಲ್ಲಿ ಜರುಗಿದ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯ ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಲು ಪಾಲಿಕೆಯ ಸಭಾಂಗಣದಲ್ಲಿ ಆ.7ರಂದು ಮಧ್ಯಾಹ್ನ 1 ಗಂಟೆಗೆ ಸಭೆ ಆಯೋಜಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್ ಬಿ ಶೆಟ್ಟಣ್ಣವರ ತಿಳಿಸಿದ್ದಾರೆ.
ಕಳೆದ ಜ.27ರಂದು ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಿಗದಿಯಾಗಿತ್ತು. ಅದರಂತೆ ಆಯ್ಕೆ ಪ್ರಕ್ರಿಯೆ ನಡೆದು ಹಿಂದುಳಿದ ವರ್ಗಕ್ಕೆ ಮೀಸಲಾಗದ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಶೋಕ ನ್ಯಾಮಗೊಂಡ ಹಾಗೂ ಬಿಜೆಪಿಯಿಂದ ಎಂ ಎಸ್ ಕರಡಿ ಅಭ್ಯರ್ಥಿಯಾಗಿದ್ದರು. ಸಾಮಾನ್ಯ ಮಹಿಳೆಗೆ ಮೀಸಲಾದ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ವಿಮಲಾ ರಫೀಕ್ ಕಾಣೆ ಹಾಗೂ ಬಿಜೆಪಿಯಿಂದ ಪಕ್ಷೇತರ ಸದಸ್ಯೆ ಸುಮಿತ್ರಾ ರಾಜು ಜಾಧವ ಅಭ್ಯರ್ಥಿಯಾಗಿದ್ದರು. ಆದರೆ, ಉಪ ಮೇಯರ್ ಆಯ್ಕೆ ವೇಳೆ ಗೊಂದಲ, ಗದ್ದಲ ಉಂಟಾಗಿದ್ದರಿಂದ ಉಪ ಮೇಯರ್ ಆಯ್ಕೆ ಪ್ರಕ್ರಿಯೆನ್ನು ಮುಂದೂಡಿದ್ದಾಗಿ ಪ್ರಾದೇಶಿಕ ಆಯುಕ್ತರು ಘೋಷಿಸಿದ್ದರು.
ಉಪ ಮೇಯರ್ ಸ್ಥಾನಕ್ಕೆ ಮುಂದೂಡಿದ್ದ ಚುನಾವಣೆ ಫೆ.12ರಂದು ನಿಗದಿಯಾಗಿ ನಡೆಯಿತು. ಆದರೆ, ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಫಲಿತಾಂಶ ಘೋಷಿಸದಂತೆ ನ್ಯಾಯಾಲಯದ ನಿರ್ದೇಶನ ನೀಡಿತ್ತು. ಕಾಂಗ್ರೆಸ್‌ನ ನಾಲ್ವರು ಪರಿಷತ್ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿದ್ದನ್ನು ಪ್ರಶ್ನಿಸಿ ಬಿಜೆಪಿ ರಿಟ್ ಅರ್ಜಿ ಸಲ್ಲಿಸಿತ್ತು. ಚುನಾವಣೆ ನಡೆಸಬಹುದು, ಆದರೆ ಮುಂದಿನ ಆದೇಶದವರೆಗೆ ಫಲಿತಾಂಶ ಪ್ರಕಟಿಸದಂತೆ ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ಅಚ್ಚರಿಯ ಬೆಳವಣಿಗೆಯಲ್ಲಿ ಪಾಲಿಕೆ ಸದಸ್ಯರು ನಿಯಮ ಪ್ರಕಾರ ತಮ್ಮ ಹಾಗೂ ಕುಟುಂಬದ ಆಸ್ತಿ ವಿವರ ಸಲ್ಲಿಸಿಲ್ಲ. ಹೀಗಾಗಿ ಅವರ ಸದಸ್ಯತ್ವ ರದ್ದುಗೊಳಿಸಬೇಕೆಂದು ಕೆಲವರು ನ್ಯಾಯಾಯದ ಮೊರೆ ಹೋಗಿದ್ದರು. ಸದಸ್ಯತ್ವ ರದ್ದುಗೊಳಿಸುವುದು ಸರಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಕೋರ್ಟ್ ತೀರ್ಪು ನೀಡಿತ್ತು.
ಪಾಲಿಕೆಯ ಆಡಳಿತಕ್ಕಾಗಿ ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಹಗ್ಗ-ಜಗ್ಗಾಟ, ಪವರ್ ಪಾಲಿಟಿಕ್ಸ್ ಬೆಳವಣಿಗೆಗಳು ನಡೆದು ಕೊನೆಗೆ ಸರಕಾರವೇ ಆಸ್ತಿ ವಿವರ ಸಲ್ಲಿಸದ ಕಾರಣಕ್ಕೆ ಕಾರ್ಪೋರೇಟರ್‌ಗಳ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿತ್ತು. ಮೇಯರ್-ಉಪ ಮೇಯರ್ ಚುನಾವಣೆಯ ಫಲಿತಾಂಶವೂ ಪ್ರಕಟಗೊಳ್ಳದೆ, ಚುನಾಯಿತ ಸದಸ್ಯರ ಅಧಿಕಾರವೂ ಇರಲಿಲ್ಲ. ಆಯುಕ್ತರಿಂದಲೇ ಪಾಲಿಕೆ ಕಾರ್ಯಚಟುವಟಿಕೆ ನಡೆದಿದೆ.
ತಮ್ಮ ಸದಸ್ಯತ್ವ ಉಳಿಸಿಕೊಳ್ಳಲು ಚುನಾಯಿತರಾದವರು ರಾಜಕೀಯ ನಾಯಕರ ಮನೆ ಬಾಗಿಲು ಬಡಿದು ಕಸರತ್ತು ನಡೆಸಿದ್ದರು. ಆದರೀಗ ಮೇಯರ್ -ಉಪ ಮೇಯರ್ ಚುನಾವಣೆಯ ಫಲಿತಾಂಶ ಘೋಷಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ, ಚುನಾಯಿತರಾದವರ ಸದಸ್ಯತ್ವದ ಬಗ್ಗೆ ರಾಜಕೀಯ ಕುತೂಹಲ ಕೆರಳಿಸಿದೆ.