ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಸಭಾಭವನದಲ್ಲಿ ಇದೇ ಮಾರ್ಚ್ 21ರಿಂದ 27ರವರೆಗೆ ‘ರಾಷ್ಟ್ರೀಯ ಐಕ್ಯತಾ ಶಿಬಿರ-2025ʼ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕುರಿತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ. ಅಶೋಕಕುಮಾರ ಸುರಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, “ರಾಜ್ಯ ಸರ್ಕಾರ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯ ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ” ಎಂದು ತಿಳಿಸಿದ್ದಾರೆ.
“ಮಾರ್ಚ್ 21ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕರ್ನಾಟಕ ರಾಜ್ಯ ಎನ್‌ಎಸ್‌ಎಸ್ ಸಲಹಾ ಸಮಿತಿ ಸದಸ್ಯ ಜಾವಿದ್ ಜಮಾದಾರ ಹಾಗೂ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಭಾಗವಹಿಸಲಿದ್ದು, ಬೆಂಗಳೂರಿನ ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶಕ ಡಿ. ಕಾರ್ತಿಗ್ವಾನ, ಕರ್ನಾಟಕ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ. ಪ್ರತಾಪ ಲಿಂಗಯ್ಯ, ಮಹಿಳಾ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್ ಎಮ್ ಚಂದ್ರಶೇಖರ ಉಪಸ್ಥಿತರಿರಲಿದ್ದಾರೆ. ಈ ಏಳು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹಾರಾಷ್ಟ್ರದ ಕಲ್ಲಂಗಡಿ; ಸ್ಥಳೀಯ ರೈತರ ಆದಾಯಕ್ಕೆ ಪೆಟ್ಟು
“ಮಾರ್ಚ್ 27ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್ ಸಮಾರೋಪ ಭಾಷಣ ಮಾಡಲಿದ್ದು, ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶಕ ಬೆಂಗಳೂರಿನ ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶಕ ಡಿ.ಕಾರ್ತಿಗ್ವಾನ್, ಕರ್ನಾಟಕ ರಾಜ್ಯ ಸರ್ಕಾರ ಎನ್ಎಸ್ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್ ಎಮ್ ಚಂದ್ರಶೇಖರ ಉಪಸ್ಥಿತರಿರಲಿದ್ದಾರೆ” ಎಂದು ತಿಳಿಸಿದ್ದಾರೆ.