ಮಗು ಸೇರಿದಂತೆ ತಾಯಂದಿರೂ ಕೂಡಾ ವೈಯಕ್ತಿಕ ಸದೃಢವಾಗಿರಲು ಹಾಗೂ ಆರೋಗ್ಯಕ್ಕಾಗಿ ಪ್ರೋಟಿನ್, ವಿಟಮಿನ್ ಹಾಗೂ ಪೌಷ್ಠಿಕಾಂಶಗಳ ಸೇವನೆಗೆ ಆದ್ಯತೆ ನೀಡಬೇಕು ಎಂದು ಸಿಂದಗಿ ತಾಲೂಕಿನ ಸಿಡಿಪಿಒ ಶಂಭುಲಿಂಗ ಹಿರೇಮಠ ಹೇಳಿದರು.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕುಂದಗೋಳಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ವನದಲ್ಲಿ ಬುಧವಾರ ಜರುಗಿದ ರಾಷ್ಟ್ರೀಯ ಪೋಷಣೆ ಮಾಸಾಚರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಗರ್ಭಿಣಿಯರು ಹಾಗೂ ಬಾಣಂತಿಯರು ಇಲಾಖೆಯಿಂದ ದೊರೆಯುವಂತಹ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ವೈಯಕ್ತಿಕ ಆರೋಗ್ಯದ ಜೊತೆ ಮಗುವಿನ ಆರೋಗ್ಯ ಹಾಗೂ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಶಾನ, ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ, ಅಪೌಷ್ಟಿಕತೆ ನಿವಾರಣೆ, ಹೆಣ್ಣು ಮಗುವಿನ ದಿನಾಚರಣೆ, ತಾಯಿ ಹೆಸರಲ್ಲಿ ಸಸಿ ನೆಡುವುದು, ಸುಕನ್ಯಾ ಸಮೃದ್ಧಿ ಯೋಜನೆ ಅಡಿಯ ಪಾಸ್ ಬುಕ್ ವಿತರಣೆ ಜರುಗಿದವು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಎಸ್.ಕೊಡಗೀಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕೆ.ಜಿ.ಅಶ್ವತ್ತೇಗೌಡ ಅವಿರೋಧ ಆಯ್ಕೆ
ವಿಜಯಪುರ ಉಜ್ವಲ ಸಂಸ್ಥೆಯ ಸಾಗರ ಘಾಟಿಗೆ ಶಾಲಾ ಪೂರ್ವ ಶಿಕ್ಷಣ ಕುರಿತು ಮಾತನಾಡಿದರು. ಗ್ರಾಮದ ವೀರ ಗಂಟೆಯ್ಯ ಗದ್ದಿಗೆಮಠ ಸಾನಿಧ್ಯ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ದಾವಲಂಬಿ ಸೋಲಾಪುರ, ಉಪಾಧ್ಯಕ್ಷೆ ಶಿವಲೀಲಾ ಕುರುಮಲ್ಲಪ್ಪಗೋಳ, ಎಸಿಡಿಪಿಒ ಎಸ್ ಎನ್ ಕೊರವಾರ, ಆರೋಗ್ಯ ಇಲಾಖೆಯ ಎಂಡಿ ಮೋತಿಬಾಯಿ, ಮೇಲ್ವಿಚಾರಕರಾದ ಎ ಎಂ ಸಜ್ಜನ್, ಪೂರ್ಣಿಮಾ ಮಹಾಜನ ಶೆಟ್ಟಿ, ಎಸ್ ಜಿ ಪಾಟಿಲ, ಅನ್ನಪೂರ್ಣ ಹಡಪದ, ಶಾಂತಾ ನಾಯಕ ಸೇರಿದಂತೆ ಇತರರು ಇದ್ದರು.