ಹಕ್ಕಿಜ್ವರ ಪಕ್ಷಿಗಳಿಗೆ ಹರಡುವ ಕಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜಯಪುರ ಕಂದಾಯ ಉಪ ವಿಭಾಗಾಧಿಕಾರಿ ವಿನಯ ಪಾಟೀಲ ಹೇಳಿದರು.
ಇಂಡಿ ತಾಲೂಕಿನ ವಿಧಾನಸೌಧದ ಕಂದಾಯ ಉಪ ವಿಭಾಗಾಧಿಕಾರಿಗಳ ಸಭಾಭವನದಲ್ಲಿ ನಡೆದ ಹಕ್ಕಿಜ್ವರ ಕುರಿತು ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಪಶು ವೈದ್ಯಧಿಕಾರಿ ಡಾ. ರಾಜಕುಮಾರ ಅಡಗಿ ಮಾತನಾಡಿ, “ತಾಲೂಕಿನಲ್ಲಿ ಒಟ್ಟು ಹತ್ತು ಸಾವಿರ ಕೋಳಿಗಳಿವೆ. ಸಾವಿರ ಕೋಳಿಯ 4 ಫಾರಂಗಳಿವೆ. 50 ಕೋಳಿಯ 30 ಫಾರಂಗಳಿಗೆ. ಮರಣ ಹೊಂದಿದ ಕೋಳಿಗಳ ವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ ಕೋಳಿಗಳ ಸಾವಿನ ಕುರಿತು ವೈದ್ಯಕೀಯ ಕಾರಣಗಳನ್ನು ಕಂಡುಕೊಳ್ಳಲಾಗುತ್ತಿದೆ. ಯಾವುದೇ ಕಾಯಿಲೆಯ ಕುರಿತು ಆತಂಕ ಬೇಡ, ಎಚ್ಚರವಿರಲಿ” ಎಂದರು.
ತಾಲೂಕು ಹಕ್ಕಿಜ್ವರದ ನೋಡಲ್ ಅಧಿಕಾರಿ ಡಾ. ಪ್ರಕಾಶ್ ಮಿರ್ಜಿ ಮಾತನಾಡಿ, “ತಾಲೂಕಿನಲ್ಲಿ ಕೋಳಿ ಶೀತ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೋಳಿ ಸಾಕಾಣಿಕೆ ಕೇಂದ್ರಗಳ ಮಾಲೀಕರಿಗೆ ಕೋಳಿಗಳಲ್ಲಿ ಅಸಹಜ ಸಾವು ಕಂಡುಬಂದಲ್ಲಿ ತಕ್ಷಣವೇ ಪಶುಪಾಲನ ಇಲಾಖೆಗೆ ತಿಳಿಸುವಂತೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಅಂಗಡಿಗಳಲ್ಲಿ ಉತ್ಪಾದನೆ ಆಗುವ ಮಾಂಸ ಹಾಗೂ ಮೊಟ್ಟೆಗಳನ್ನು ಸೂಕ್ತ ರೀತಿ ಪರಿಶೀಳನೆ ಮಾಡಲು ಕ್ರಮವಹಿಸಲು ಸೂಚನೆ ನೀಡಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ನೀರು ಕುಡಿಯಲು ಹೋಗಿ ಬಾಲಕ ನೀರುಪಾಲು
ಈ ವೇಳೆ ಪಶು ವೈದ್ಯಧಿಕಾರಿ ಡಾ ಲಕ್ಷ್ಮೇಶ ಕಟ್ಟಿಮನಿ, ಡಾ. ರವಿಕಾಂತ ಬಿರಾದಾರ, ಡಾ. ರಾಜಶೇಖರ ಕಾರಜೋಳ, ಡಾ. ಸಂಜೀವ್ ಕುಮಾರ ಲಾಳಸಂಗಿ, ಡಾ. ವಿನಯ ಜಂಬಗಿ, ಡಾ. ಪ್ರಶಾಂತ ಬೆಳ್ಳುಂಡಗಿ, ಡಾ, ಆಷಾರಾಣಿ ದಶವಂತ, ಸಿಬ್ಬಂದಿಗಳಾದ ರಾಮಣ್ಣ ಉಪ್ಪಾರ, ರಮೇಶ ನರಳೆ, ಜಾವೇದ ಭಾಗವಾನ, ಪುಂಡಲೀಕ ಕೂಡಗಿ, ಮೂಕಲಾಜಿ ಮತ್ತಿತರರು ಇದ್ದರು.
