ವಿದ್ಯಾರ್ಥಿಗಳು ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲೇಬೇಕಾಗಿದೆ. ಎಷ್ಟೇ ಕಷ್ಟ ಬಂದರೂ ಸಾಧಿಸುತ್ತೇನೆ ಎನ್ನುವ ಛಲ ಎಲ್ಲ ವಿದ್ಯಾರ್ಥಿಗೂ ಬರಬೇಕು. ಈ ಪರೀಕ್ಷೆ ವೇಳೆ ತಪ್ಪಸಿನ ಹಾಗೆ ಕಠಿಣ ಪರಿಶ್ರಮ ವಹಿಸಿ ಹೊರ ಜಗತ್ತಿನ ಸಹವಾಸ ಬಿಟ್ಟು ನಿಷ್ಠೆಯಿಂದ ಅಭ್ಯಾಸ ಮಾಡಿದ್ದೇ ಆದಲ್ಲಿ, ಜೀವನದಲ್ಲಿ ಒಳ್ಳೆಯ ಹುದ್ದೆಯನ್ನು ಪಡೆದು ನಿಮ್ಮ ಪಾಲಕರು, ನಿಮ್ಮ ಗ್ರಾಮಸ್ಥರಿಗೆ ಮಾತ್ರವಲ್ಲದೇ ನಿಮ್ಮ ಜಿಲ್ಲೆಗೆ ಒಳ್ಳೆಯ ಹೆಸರು ತರಲು ಸಾಧ್ಯವಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗದ ಅಭಿಲಾಷೆಯಿಂದ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ʼಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ?ʼ ಎಂಬ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರಾಸ್ತಾವಿಕ ಶ್ರೀನಾಥ್ ಪೂಜಾರಿ ಮಾತನಾಡಿ, “ವಸತಿ ನಿಲಯಗಳು ಕೇವಲ ಊಟದ ಕೇಂದ್ರವಾಗದೆ ಶಿಕ್ಷಣದ ಶೈಕ್ಷಣಿಕ ಕೇಂದ್ರಗಳಾಗಿ ಮಾರ್ಪಾಡಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಸಂಘಟನೆ ಅಡಿಯಲ್ಲಿ ಈ ರೀತಿಯ ಸರ್ವ ಸಮಾಜದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜನೆ ಮಾಡಿ ಒಳ್ಳೆಯ ಹುದ್ದೆ ಪಡೆಯಲೆಂಬ ಮಹಾದಾಸೆ ನಮ್ಮದು” ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೋತದಾರ ಅವರು ಅಧಿಕಾರಿಗಳನ್ನು ಸ್ವಾಗತಿಸಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕ್ರಾಂತಿ ಗೀತೆ ಹಾಡುವುದರ ಮೂಲಕ ವಿದ್ಯಾರ್ಥಿಗಳ ಮನಮುಟ್ಟಿಸಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ ಜಿಲ್ಲೆಯ ಪ್ರಖ್ಯಾತ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯ ಶರಣಯ್ಯ ಭಂಡಾರಿಮಟ್ಟವರು ಉಪನ್ಯಾಸ ನೀಡಿದರು.
ಇದನ್ನೂ ಓದಿದ್ದೀರಾ? ಗ್ರಾಮೀಣ ಆರ್ಥಿಕತೆಯ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು: ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವುದೇ ಸರ್ಕಾರ?
ಈ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ವಿಜಯಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ ಜೆ ಇಂಡಿ, ಬ ಬಾಗೇವಾಡಿಯ ಸಮಾಜ ಕಲ್ಯಾಣ ಇಲಾಕೆಯ ಸಹಾಯಕ ನಿರ್ದೇಶಕ ಮಂಜು ಹಿರೇಮನಿ, ಇಂಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಸೇರಿದಂತೆ ಅನೇಕ ಗಣ್ಯರು ಇದ್ದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಮುಖಂಡ ಅಕ್ಷಯ್ ಕುಮಾರ ಅಜಮನಿ, ಉಪಾಧ್ಯಕ್ಷ ಮಹಾದೇವ ಚಲವಾದಿ, ಸಂದೇಶ ಕುಮಟಗಿ, ಯಾಸಿನ್, ರಾಹುಲ್, ಪಂಡಿತ್, ಯುವರಾಜ್, ಶಂಕರ್, ತುಳಸೀರಾಮ್, ಪ್ರತಾಪ್, ಭೀಮು, ಪೂಜಾ, ಪ್ರೇಮಾ, ಶಿಲ್ಪಾ, ಸೌಮ್ಯ ಸೇರಿದಂತೆ ಮುಂತಾದ ಪದಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಎಲ್ಲ ಅಧಿಕಾರಿ ವೃಂದ ಮತ್ತು ಸಿಬ್ಬಂದಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಳ್ಳುತ್ತಿರುವ ಜಿಲ್ಲೆಯ ಸಾವಿರಾರು ವಿದ್ಯಾರ್ಥಿ ಯುವಜನರು ಭಾಗಿಯಾಗಿದ್ದರು.