ಸಾವಯವ ಕೃಷಿಗೆ ಪ್ರಸ್ತುತದಲ್ಲಿ ವಿಶೇಶ ಸ್ಥಾನ ಕೊಡಲಾಗಿದೆ. ಏಕೆಂದರೆ ಭೂಮಿಯ ಉತ್ಪಾದಕತೆ ಸಾಮರ್ಥ್ಯವು ಕುಂಠಿತವಾಗುತ್ತಿರುವುದನ್ನು ತಡೆಗಟ್ಟಲು ಸಾವಯವ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಅತೀ ಹೆಚ್ಚಿನ ಖರ್ಚಿನಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರಗಳನ್ನು ನಿಯಂತ್ರಿಸಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಅತೀ ಅವಶ್ಯಕವಾಗಿದೆ ಎಂದು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಇಂಡಿ, ಕೃಷಿ ಇಲಾಖೆ ಹಾಗೂ ಶ್ರೀ ಗುರುಚಂದ್ರ ಶೇಖರ ಸಂಸ್ಥಾನ ಹಿರೇಮಠ, ತದ್ದೇವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ‘ಸಾವಯವ ಕೃಷಿ ಚಿಂತನಾ ಗೋಷ್ಠಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್ಚುತ್ತಿರುವ ರಾಸಯನಿಕ ಗೊಬ್ಬರಗಳ ಬೆಲೆಯು ಸಹ, ಕೃಷಿಕರಲ್ಲಿ ಮುಂದೆ ಏನು ಎಂಬ ಯೋಚನೆ ಬಂದಾಗ, ಸಾವಯವ ಕೃಷಿಯು ಒಂದು ಆಶಾದಾಯಕ ದಾರಿಯಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಗುರುಚಂದ್ರಶೇಖರ ಸಂಸ್ಥಾನ ಹಿರೇಮಠ, ತದ್ದೇದಾಡಿದ ಶ್ರೀ ಮಹಾಂತೇಶ ಹಿರೇಮಠ ಗುರುಗಳು ಮಾತನಾಡಿ, ಭಾರತದಲ್ಲಿ ಹಸಿರು ಕ್ರಾಂತಿಯ ಪರಿಣಾಮದಿಂದಾಗಿ ರಾಸಾಯನಿಕ ಗೊಬ್ಬರಗಳ ಹಾಗೂ ಪೀಡೆನಾಶಕಗಳ ವಿವೇಚನಾರಹಿತ ಬಳಕೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮಲಿನಗೊಳ್ಳುತ್ತಿವೆ ಎಂದು ಬೇಸರಿಸಿದರು.
ವಿಜ್ಞಾನಿ ಡಾ. ಪ್ರಕಾಶ ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೃಷಿ ಅಧಿಕಾರಿ ಶ್ರೀ ದಾನಪ್ಪ ಕರ್ತೃ, ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿದರು. ನಂತರ ತಾಂತ್ರಿಕ ಗೋಷ್ಠಿಯಲ್ಲಿ ಡಾ.ಪ್ರಕಾಶ ಜಿ. ಸಾವ ಯವ ಕೃಷಿ ಯಲ್ಲಿ ಬೀಚಾಮೃತ, ಜೀವಾಮೃತ, ಕೃಷಿ ಬೆಳೆಗಳ ಹೊದಿಕೆಯ ಮಹತ್ವ, ಹಸಿರಲೆ ಗೊಬ್ಬರ, ಅಂತರ ಬೆಳೆ, ಮಿಶ್ರ ಬೆಳೆಗಳ ಕುರಿತು ಮಾಹಿತಿ ಒದಗಿಸಿದರು.
ಇದನ್ನು ಓದಿದ್ದೀರಾ? ಬಾಗಲಕೋಟೆ | ರಾಜ್ಯದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಿ: ಕರವೇ ಶಿವರಾಮೇ ಗೌಡ ಬಣ ಆಗ್ರಹ
ಡಾ. ಪ್ರೇಮ್ ಚಂದ್ ಯು ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ, ಡಾ. ಬಾಲಾಜಿ ನಾಯಕ, ಸಾವಯವ ಕೃಷಿಯಲ್ಲಿ ಸಾವಯವ ಇಂಗಾಲ ಹಾಗೂ ಮಣ್ಣಿನ ಫಲವತ್ತತೆ, ಡಾ. ಪ್ರಸಾದ ಎಂ. ಜಿ. ಸಾವಯವ ಕೃಷಿಯಲ್ಲಿ ಜಾನುವಾರುಗಳ ಪಾಲನೆ, ಎರೆಗೊಬ್ಬರ ತಯಾರಿಕೆ ಕುರಿತು ಉಪನ್ಯಾಸ ನೀಡಿದರು. ಭತಗುಣಕಿ ಗ್ರಾಮದ ಪ್ರಗತಿಪರ ರೈತ ಶ್ರೀ ಮುದ್ದುಗೌಡ ಪಾಟೀಲ್ ಇವರು ಸಾವಯವ ಕೃಷಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
