ಹಾಸನದ ಸಂಸದ ಹಾಗೂ ಪ್ರಸ್ತುತ ಲೋಕಸಭಾ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ನಡೆಸಿರುವ ದೌರ್ಜನ್ಯಗಳ ಪ್ರಕರಣವು ಅತ್ಯಂತ ಆಘಾತಕಾರಿಯಾಗಿದೆ. ಹಾಸನದಲ್ಲಿ ಎಲ್ಲೆಂದರಲ್ಲಿ ಸಿಕ್ಕ ಪೆನ್ ಡ್ರೈವ್‌ಗಳ ಮೂಲಕ ಈ ಸಂಗತಿ ಹೊರಬಿದ್ದಿದ್ದು, ಇಡೀ ನಾಗರಿಕ ಸಮಾಜವೇ ದಿಗ್ಭ್ರಮೆಗೊಂಡಿದೆ. ಈ ಅಮಾನುಷ ಕೃತ್ಯಕ್ಕೆ ಖಡನೀಯ ಎಂದು ಎಐಡಿವೈಒ ಕರ್ನಾಟಕ ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ವಿಜಯಪುರದಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದ, “ಚುನಾಯಿತ ಸಂಸದನಾಗಿ ಕ್ಷೇತ್ರದ ಜನತೆ ತನಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕಾದ ವ್ಯಕ್ತಿ ಹೀಗೆ ತನ್ನ ಮನೋವಿಕೃತಿಯನ್ನು ಮೆರೆದಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಮಹಿಳೆಯನ್ನು ಕೇವಲ ಭೋಗದ ವಸ್ತುವೆಂದು ಪರಿಗಣಿಸಿರುವ ಇವರನ್ನು ಟೀಕಿಸಲು ಪದಗಳೇ ಸಾಲದಾಗಿದೆ. ಇವರ ಬೆದರಿಕೆಗಳಿಗೆ ಬಲಿಯಾದ ಹೆಣ್ಣು ಮಕ್ಕಳು ಈ ಪ್ರಕರಣವು ಹೊರ ಬೀಳುವ ಮೂಲಕ ಮತ್ತಷ್ಟು ಕುಸಿದು ಹೋಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪೋಕ್ಸೊ ಪ್ರಕರಣ; ಜಿಲ್ಲಾ ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರಿ
“ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಗೆ ತಡವಾಗಿಯಾದರೂ ಎಸ್ಐಟಿಯನ್ನು ನೇಮಿಸಿರುವುದು ಸ್ವಾಗತ. ಆದರೆ ಸಂತ್ರಸ್ತೆಯರು ಬಂದು ದೂರು ದಾಖಲೆಸುವವರೆಗೆ ಕಾಯದೆ ಶೀಘ್ರ ತನಿಖೆ ನಡೆಸಿ ಅಪರಾಧಕ್ಕೆ ತಕ್ಕ ನಿದರ್ಶನೀಯ ಶಿಕ್ಷೆಯನ್ನು ವಿಧಿಸಬೇಕಿದೆ. ಆರೋಪಿತ ವ್ಯಕ್ತಿಯು ಪ್ರಭಾವಿ ರಾಜಕಾರಣಿಯಾಗಿರುವುದರಿಂದ ಸಂತ್ರಸ್ತೆಯರು ಧೈರ್ಯವಾಗಿ ಮುಂದೆ ಬಂದು ದೂರು ನೀಡುತ್ತಿಲ್ಲ. ಅಲ್ಲದೆ ಸಂತ್ರಸ್ತ ಹೆಣ್ಣು ಮಕ್ಕಳ ಜೀವ ಮತ್ತು ಬದುಕು ಅಪಾಯದಲ್ಲಿ ಇರುವುದರಿಂದ ಅವರಿಗೆ ಸೂಕ್ತ ರಕ್ಷಣೆ, ವೈದ್ಯಕೀಯ ಆರೈಕೆ ಮತ್ತು ಸಾಂತ್ವನದ ಅವಶ್ಯಕತೆ ಇದೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಸಕ್ರಿಯಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಎಐಡಿವೈಒ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
