ಶರಣರ ಶಕ್ತಿ’ ಚಲನಚಿತ್ರ ಪ್ರಸಾರವನ್ನು ತಡೆಹಿಡಿಯಬೇಕು ಹಾಗೂ ನಿರ್ಭಂಧಿಸಬೇಕೆಂದು ಒತ್ತಾಯಿಸಿ ಬಸವ ಮಹಾಮನೆ ಸಮಿತಿ ನೇತೃತ್ವದಲ್ಲಿ, ಅನೇಕ ಬಸವಪರ ಸಂಘಟನೆಗಳ ಸದಸ್ಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಮುದ್ದೇಬಿಹಾಳ ತಹಶೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ವಿವಾದಿತ ವಚನ ದರ್ಶನದ ವಿರುದ್ದವೂ ಘೋಷಣೆ ಕೂಗಿ, ಬರುವ 18ರಂದು ಚಲನಚಿತ್ರ ಬಿಡುಗಡೆಯಾಗುತ್ತದೆಂದು ಹೇಳಲಾಗಿದ್ದು, ಈಗಾಗಲೇ ಬಿಡುಗಡೆಯಾದ ಚಿತ್ರದ ಟ್ರೈಲರ್ ನಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ, ಬಸವಾದಿ ಶರಣರಿಗೆ ಅವಮಾನ ಮಾಡುವ ದೋಷಗಳು ಕಂಡುಬಂದಿವೆ.
ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘನ ಸರಕಾರವು ಘೋಷಿಸಿದ ಬಸವಣ್ಣನವರ ಅಕ್ಕ, ಶರಣೆ ಅಕ್ಕನಾಗಮ್ಮನವರು ಅನೈತಿಕವಾಗಿ ಗರ್ಭಧರಿಸಿದ್ದಾರೆಂದು ಚಿತ್ರಿಕರಿಸಿದ್ದು, ಲಿಂಗಾಯತ ಹಾಗೂ ಬಸವಾಭಿಮಾನಿಗಳಿಗೆ ಅವಮಾನವಾಗಿದೆ. ಇಂಥ ತಪ್ಪನ್ನು ಯಾವ ನಾಗರಿಕ ಸಮಾಜವೂ ಒಪ್ಪುವುದಿಲ್ಲ, ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಗುಡುಗಿದರು.
ಬಲವಂತದಿಂದ ಲಿಂಗ ಕಟ್ಟುತ್ತೇವೆ ಎಂಬ ಮಾತು ಲಿಂಗಾಯತ ಧರ್ಮ ಪ್ರಣಾಳಿಕೆಯಲ್ಲಿ ಇಲ್ಲ. ಇದು ಧರ್ಮತತ್ವ (ವಚನವಾಙ್ಮಯ)ಕ್ಕೆ ವಿರುದ್ಧವಾದದ್ದು. ಇದನ್ನು ಬಲವಾಗಿ ಖಂಡಿಸುತ್ತೇವೆ. ವರ್ಣರಹಿತ, ವರ್ಗರಹಿತ, ಸಮಸಮಾಜ ಕಟ್ಟಿದ ಶರಣರಲ್ಲಿ ಕೆಲವರನ್ನು ಕಡುನೀಲಿಬಣ್ಣನಿಂದ ಚಿತ್ರೀಕರಿಸಿದ್ದನ್ನು ಖಂಡಿಸುತ್ತೇವೆ. ಬಸವಣ್ಣನವರ ಅಂತ್ಯವು ಹೇಗಾಯಿತೆಂದು ಯಾರಿಗೂ ತಿಳಿಯದ್ದನ್ನು ಕೊಲೆಯಾಗಿದೆ ಎಂದು ಚಿತ್ರೀಕರಿಸಿರುವುದು ಅಕ್ಷಮ್ಯ ಅಪರಾಧ ಇದನ್ನು ಖಂಡಿಸುತ್ತೇವೆ ಎಂದರು.
ಇದನ್ನು ಓದಿದ್ದೀರಾ? ವಿಜಯಪುರ | ಹಣಮಾಪುರ ಗ್ರಾ.ಪಂ. ಚುನಾವಣೆ : ನೂತನ ಸದಸ್ಯರಿಗೆ ಸಚಿವರಿಂದ ಅಭಿನಂದನೆ
ಈ ಚಲನಚಿತ್ರದ ನಿರ್ದೇಶಕ ದಿಲೀಪ ಶರ್ಮ ಮತ್ತು ನಿರ್ಮಾಪಕಿ ಆರಾಧನಾ ಕುಲಕರ್ಣಿ, ವೇದಾಗಮ ಸನಾತನ ಹಿಂದೂ ಮತ್ತು ಹಿಂದುತ್ವದ ಪರ್ಯಾಯವಾದ ಬಸವಾದಿ ಪ್ರಮಥರ ತತ್ವ ಚಿಂತನೆಗಳಾದ ಲಿಂಗಾಯತವನ್ನು ಪ್ರಜ್ಞಾಪೂರ್ವಕವಾಗಿ ಅವಹೇಳನ ಮಾಡಲು ಈ ಚಲನಚಿತ್ರವನ್ನು ಚಿತ್ರೀಕರಿಸಿದ್ದಾರೆಂದು ನಮ್ಮ ಭಾವನೆಯಾಗಿದೆ. ಇದು ಸಮಾಜದಲ್ಲಿ ಕ್ಷೋಭೆಯನ್ನು ಉಂಟುಮಾಡುವ ಕಾರಣದಿಂದ ತೀವ್ರವಾಗಿ ಖಂಡಿಸುತ್ತೇವೆ ಎಂದರು.