ಜೀವ ಸಂಕುಲಕ್ಕೆ ನೀರು ಅತ್ಯಗತ್ಯವಾಗಿದ್ದು, ಜಲಮೂಲಗಳ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಿಜಯಪುರ ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಮತ್ತು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಹಾಗೂ ಬಿ.ಎಲ್.ಡಿ.ಇ.ಎ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಜಲ ಸಖಿ-ಮಹಿಳಾ ಜಲ ಜಾಗೃತಿ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ನೀರಿನ ಪಾರಂಪರಿಕ ಬಳಕೆದಾರರಾಗಿದ್ದಾರೆ. ನೀರು ಸಂರಕ್ಷಣೆಯಲ್ಲಿ ಮಹಿಳೆಯ ಪಾತ್ರ ಬಹುಮುಖ್ಯವಾಗಿದೆ. ನೀರಿನ ಮಹತ್ವ ಕುರಿತು ಅವರಿಗೆ ಸಾಕಷ್ಟು ಜ್ಞಾನವಿದೆ. ಮುಂದೊಂದು ದಿನ ನೀರಿಗಾಗಿಯೇ ಹೋರಾಟಗಳು ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ನೀರಿನ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ನೀರಿನ ಸದ್ಬಳಕೆ ಮತ್ತು ಸಂರಕ್ಷಣೆ ಕುರಿತು ಚರ್ಚೆಗಳು ನಡೆಯಬೇಕು ಎಂದರು.
ಪ್ರಾಕೃತಿಕ ಜಲಮೂಲಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಕೇವಲ ಜನಪ್ರತಿನಿಧಿಗಳು ಮಾತ್ರ ಇದಕ್ಕೆ ಹೊಣೆಗಾರರಲ್ಲ, ಸಮಾಜದ ಎಲ್ಲರೂ ನೀರಿನ ಸಂರಕ್ಷಣೆಗೆ ಮುಂದಾಗಬೇಕು. ನೀರು ಮಿತವಾಗಿ ಬಳಸಬೇಕು. ನೀರಿನ ಬಗ್ಗೆ ಅಧ್ಯಯನ. ಸಂಶೋಧನೆ, ಡಾಕ್ಯುಮೆಂಟರಿ ಚಿತ್ರಗಳನ್ನು ಮಾಡಬೇಕು ಎಂದು ತಿಳಿಸಿದರು.