ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಪುರಸಭೆ ಅಧ್ಯಕ್ಷ ಮೆಹಬೂಬ ಗೂಳಸಂಗಿ ಅವರು ದಲಿತ ಸಮುದಾಯದ ಹೋರಾಟಗಾರರನ್ನು ಅವಮಾನಿಸಿದ್ದೂ ಅಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವುದನ್ನು ಖಂಡಿಸಿ ತಾಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದಿಂದ ತಮಟೆ ಚಳವಳಿ ಪ್ರತಿಭಟನೆ ಮಾಡಲಾಯಿತು.
ಪಟ್ಟಣದ ಪುರಸಭೆಗೆ ಆಗಮಿಸಿದ್ದ ಪ್ರತಿಭಟನಾಕಾರರು ಪುರಸಭೆ ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿ ಅಕ್ರೋಶ ಹೊರಹಾಕಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹರೀಶ ನಾಟೇಕರ ಮಾತನಾಡಿ, “ಪುರಸಭೆ ಅಧ್ಯಕ್ಷರು ಪದೇ ಪದೇ ಜಾತಿ ನಿಂದನೆ ಹಾಗೂ ಅವಹೇಳನಕಾರಿಯಾಗಿ ಮಾತನಾಡಿದ್ದು, ಇವರ ಮೇಲೆ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ತಾಲೂಕು ಪಂಚಾಯಿತಿ ವಸತಿ ಗೃಹ ನೆಲಸಮ ಮಾಡಿದ್ದು, ಸರಕಾರದ ಆಸ್ತಿಯನ್ನು ಹಾನಿ ಮಾಡಿದ್ದಕ್ಕಾಗಿ ಇವರ ಮೇಲೆ ಕೂಡಲೇ ಸರ್ಕಾರದಿಂದ ಕ್ರಿಮಿನಲ್ ಕೇಸು ದಾಖಲಿಸಬೇಕು” ಎಂದು ಒತ್ತಾಯಿಸಿದರು.

“ಇಂದಿರಾ ನಗರದಲ್ಲಿ ದಲಿತರಿಗೆ ಶೆಡ್ ನಿರ್ಮಿಸಿಕೊಳ್ಳಲು ಅನುಮತಿ ನೀಡಬೇಕು. ಶೆಡ್ ತೆರವುಗೊಳಿಸಿದ ಪುರಸಭೆ ಅಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಬೇಕು. ಪುರಸಭೆ ಅಧ್ಯಕ್ಷರ ಮೇಲೆ ದೌರ್ಜನ್ಯ, ಗುಂಡಾ, ಕೋಮುಗಲಭೆ ಕೇಸು ದಾಖಲಾಗಿದ್ದು ಇವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ದಲಿತ ಸಂಘಟನೆ ನಾಯಕರಿಗೆ ತೇಜೋವಧೆ ಮಾಡಿರುವ ಇವರ ಮೇಲೆ ಮಾನನಷ್ಟ ಮೊಕ್ಕದ್ಧಮೆ, ಜಾತಿನಿಂದನೆ ಕೇಸು ದಾಖಲಿಸಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ. ಮುಖ್ಯ ಅಧಿಕಾರಿ ಮಲ್ಲನಗೌಡ ಬಿರಾದಾರ್ ಮನವಿ ಪತ್ರ ಸ್ವೀಕರಿಸಿದರು.
ಇದನ್ನೂ ಓದಿ: ವಿಜಯಪುರ | ಬಿಎಲ್‌ಒ ಕೆಲಸ ನೀಡದಂತೆ ಅಂಗನವಾಡಿ ಕಾರ್ಯಕರ್ತೆಯರ ಮನವಿ
ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಪ್ರಕಾಶ ಚಲವಾದಿ, ಆನಂದ ಮದೊರು, ಬಸವರಾಜ ಸರೊರು, ಪರಶುರಾಮ ನಾಲತವಾಡ, ಸಂಜೀವ ಬಾಗೇವಾಡಿ, ಪ್ರಶಾಂತ ಕಾಳೆ, ಶಿವು ಕನ್ನೊಳ್ಳಿ, ಬಾಲಚಂದ್ರ ಹುಲ್ಲರು ಸೇರಿದಂತೆ ಹಲವಾರು ದಲಿತ ಮುಖಮಡರು ಪಾಲ್ಗೊಂಡಿದ್ದರು.