ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. 2024ರ ಲೋಕಸಭಾ ಚುನಾವಣೆಗಳು ಮತ್ತೆ ಪ್ರಾರಂಭವಾಗುತ್ತಿದ್ದು, ಬಿಜೆಪಿ ಸರ್ಕಾರ ತನ್ನ ಯಾವುದೇ ಚುನಾವಣಾ ಪ್ರಣಾಳಿಕೆಯಂತೆ ಇಡೇರಿಸಿಲ್ಲ ಎಂದು ಜಂಟಿ ಕಾರ್ಮಿಕಘಟನೆಗಳ ಸಮಿತಿ (ಜೆ ಸಿ ಟಿ ಯು) ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿತು.
ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ಮಾಡಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿಪತ್ರದಲ್ಲಿ, ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಎರಡು ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ, ಡಾ.ಸ್ವಾಮಿನಾಥನ್ ಶಿಫಾರಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ತಿಳಿಸಿದ್ದೀರಿ. ಆದರೆ, ಸಬ್ ಕಾ ಸಾಥ್ ಎಂದು ಜನಸಾಮಾನ್ಯರ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿ ಕರೆಸಿ, ಜನರಿಗೆ 2007 ಕ್ಯಾಲೋರಿ ಆಹಾರ ಪ್ರತಿದಿನ ಸಿಗದ ಪರಿಣಾಮ ಇಂದು ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ಕುಸಿದಿದೆ ಎಂದು ಆರೋಪಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟನ್ನು ಕರೋನ ಮುಂಚಿತವಾಗಿದ್ದ ಬೆಳವಣಿಗೆಗೆ ಹೋಲಿಸದೆ ಕರೋನ ನಂತರದ ಬೆಳವಣಿಗೆಗೆ ಹೋಲಿಸಿ ಆರ್ಥಿಕ ಬಿಕ್ಕಟ್ಟು ಸುಧಾರಿಸಿದೆ ಎಂದು ಹೇಳಲಾಗುತ್ತಿದೆ. ಆರ್ಥಿಕ ಬಿಕ್ಕಟ್ಟು ಸುಧಾರಿಸದಿದ್ದರೆ ಕಾರ್ಮಿಕ ಕಾನೂನುಗಳು ತಿದ್ದುಪಡಿ ಮಾಡಿ ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯಕ್ಕನ್ನು ಏಕೆ ಕಸಿಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಐದು ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸುವ ಭಾರತದಲ್ಲಿ ಶೇ.42.3 ನಿರುದ್ಯೋಗ ಏಕೆ? ಬಂಡವಾಳ ಹೂಡಿಕೆಯಾಗುತ್ತಿದೆ ಎಂದು ಪ್ರತಿಪಾದನೆ ಮಾಡುವ ಸರ್ಕಾರ ನೂರಕ್ಕೆ ಶೇ.60 ಗುತ್ತಿಗೆ ಹೊರಗುತ್ತಿಗೆ ಉದ್ಯೋಗಗಳನ್ನು ಏಕೆ ಸೃಷ್ಟಿಸಲಾಗುತ್ತದೆ?
ನಿಮ್ಮ ಈ ಆರ್ಥಿಕ ನೀತಿಗಳಿಂದ ಬಡವರ ಭಾರತ ಮತ್ತು ಶ್ರೀಮಂತರ ಭಾರತವನ್ನು ಸೃಷ್ಟಿಸಿ ದೊಡ್ಡ ಪ್ರಮಾಣದ ಆರ್ಥಿಕ ಅಸಮಾನತೆಯ ಕಂದಕವನ್ನು ಸೃಷ್ಟಿಸಿರುವುದು ಸಾಬ್ ಕಾರ್ಡ್ ವಿಕಾಸ್ ಎನ್ನುವುದು ಘೋಷಣೆ ಯಲ್ಲವೇ ಎಂದು ದೂರಿದರು.
ಭಾರತವನ್ನು ಕಟ್ಟಿರುವ ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗಿಕರಿಸಿದ್ದಲ್ಲದೆ ಸರ್ಕಾರದ ಆಸ್ತಿಯನ್ನು ಏನ್ ಎಂ ಪಿ ಯ ಮುಖಾಂತರ ಖಾಸಗಿ ಅವರಿಗೆ ದಾನ ಮಾಡಿದರೆ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಲು ಸಾಧ್ಯವಿದೆಯಾ? ಗರಿಷ್ಠ ಆಡಳಿತ ಕನಿಷ್ಠ ಸರ್ಕಾರ ಎಂದರೆ ಸಾರ್ವಜನಿಕ ಒಡೆತನವನ್ನು ಖಾಸಗಿ ವ್ಯಕ್ತಿಗಳಿಗೆ ಅಡಮಾನ ಇಡುವುದೇ?
ದೇಶಕ್ಕೆ ಅನ್ನ ನೀಡುವ ರೈತ ಬೆಳೆದ ಬೆಳೆಗಳಿಗೆ ಡಾಕ್ಟರ್ ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆಗೆ ಕಾನೂನು ತರುವ ಬದಲು ರೈತನನ್ನು ಬಲಿ ತೆಗೆದುಕೊಳ್ಳುವ ನೀತಿ ಸರಿಯೇ ಎಂದು ಪ್ರಶ್ನಿಸಿದರು.
ಕೋಮು ಭಾವನೆಗಳನ್ನು ಪ್ರಚೋದನೆಗೊಳಿಸಿ ಜನರನ್ನು ಧಾರ್ಮಿಕವಾಗಿ ಕಿತ್ತಾಡಲು ಬೇಕಾದ ವಿಷಮ ವಾತಾವರಣವನ್ನು ಸೃಷ್ಟಿಸುವುದು ಸಬ್ ಕಾ ವಿಶ್ವಾಸ್ ಎಂದರಾಗುತ್ತದೆಯೇ. ಆದ್ದರಿಂದ ಸರ್ಕಾರ ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ದೇಶದ ಎಲ್ಲಾ ರೈತರು, ಕೂಲಿಕಾರರು, ಕಾರ್ಮಿಕರು ಒಂದಾಗಿ ಚಳುವಳಿ ನಡೆಸುತ್ತಿದ್ದಾರೆ. ಇಂತಹ ಚಳವಳಿಗಳ ಮೇಲೆ ದೆಹಲಿಯಲ್ಲಿ ಪೊಲೀಸ್ ದಬ್ಬಾಳಿಕೆ ಮಾಡಿರುವುದನ್ನು ಖಂಡಿಸಿರುವ ಪ್ರತಿಭಟನಾಕಾರರು, ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ಭೀಮಸಿ ಕಲಾದಗಿ, ಅಣ್ಣಾರಾಯ ಇಳೆಗೆರಿ, ಲಕ್ಷ್ಮಣ ಹಂದ್ರಾಳ, ಮಲ್ಲಿಕಾರ್ಜುನ್ ಎಚ್ ಟಿ, ಸಂಗಮೇಶ್ ಸಾಗರ್, ಭರತ್ ಕುಮಾರ್ ಎಚ್ ಟಿ, ಸುನಂದ ನಾಯಕ್, ಸಿದ್ದಲಿಂಗ ಬಾಗೇವಾಡಿ, ಸುರೇಖಾ ರಜಪೂತ್, ಸುರೇಖಾ ವಾಗ್ಮೊರೆ, ಸುವರ್ಣ ಅಲಗಣಿ, ಜಯಶ್ರೀ ಪೂಜಾರಿ, ಚಂದ್ರಶೇಖರ್ ಬರಣಾಪುರ, ಸಾಬು ಗೊಗದಡ್ಡಿ, ಈರಣ್ಣ ಬೆಳ್ಳುಂಡಗಿ, ಮೋದಿನ ಸಾಬ್ ಮಾಮದಾಪುರ್ ಅಮಾಲ, ದಯಾನಂದ್ ಅಲಿಯಾಬಾದ್, ಅಕ್ರಮ ಮಾಶಾಳಕರ್, ವಿದ್ಯಾವತಿ ಅಂಕಲಿಗಿ, ಸಿದ್ದು ರಾಯಣ್ಣವರ, ಬಾಳು ಜೇವೂರು, ಮಹಮ್ಮದ್ ಅಬ್ದುಲ್ ಖಾದಿರ್ ಇದ್ದರು.