ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ದಿನದ ಅಂಗವಾಗಿ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ಸೌಹಾರ್ದ ವೇದಿಕೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಜಯಪುರ ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಟನೆಗಳು ಮುಖಂಡರು ಹಾಗೂ ವಿಚಾರವಾದಿಗಳು, ಪ್ರಗತಿಪರ ಚಿಂತಕರು, ಪ್ರಜಾಪ್ರಭುತ್ವವಾದಿಗಳು ಕಾರ್ಯಕ್ರಮದ ಭಾಗವಾಗಿದ್ದರು.
ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಜಯಪುರ ಜಿಲ್ಲಾ ನಿವೃತ್ತ ನ್ಯಾಯಾಧೀಶ ವಸಂತ್ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಿಕ್ಷಣ ತಜ್ಞ ರಿಯಾಜ್ ಫಾರೂಕಿಯವರು, ಪ್ರತಿಯೊಬ್ಬ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನ. 1949 ನವೆಂಬರ್ 26, ಪವಿತ್ರ ಸಂವಿಧಾನದ ಮೂಲಕ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿ ಕೊಡುವ ವ್ಯವಸ್ಥೆ ಜಾರಿಗೆ ಬಂದ ದಿನವಾಗಿದೆ.
ಇಂದು ಸಂವಿಧಾನ ರಕ್ಷಣೆ ಮಾಡುವದು ಹಾಗೂ ಸಂವಿಧಾನಕ್ಕೆ ಪ್ರತಿಯೊಬ್ಬರು ಗೌರವ ಕೊಡುವುದು ಆದ್ಯ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವ ಅಗತ್ಯವಿದೆ, ದೇಶದ ಜನತೆ ಶಾಂತಿಯಿಂದ ಮತ್ತು ಸೌಹಾರ್ದತೆಯಿಂದ ಬಾಳಬೇಕಾಗಿದೆ, ಕೋಮುವಾದ, ಜಾತಿವಾದ ಪ್ರಜಾಪ್ರಭುತ್ವ ವಿರೋಧಿ ಭಾವನೆಗಳನ್ನು ಧಿಕ್ಕರಿಸಬೇಕಾಗಿದೆ ಎಂದರು.
ರಾಷ್ಟ್ರೀಯ ಸೌಹಾರ್ದ ವೇದಿಕೆಯ ನಿರ್ದೇಶಕ ಬಾಳು ಜೇವೂರು ಮಾತನಾಡಿ, ಸಂವಿಧಾನದ ಮೇಲೆ ನಂಬಿಕೆ ಇಲ್ಲದವರ ಕೈಲಿ ದೇಶದ ಆಡಳಿತ ಸಿಕ್ಕಿದೆ. ಸಂವಿಧಾನವನ್ನೇ ಬದಲಾಯಿಸಲು ನಾವು ಬಂದಿದ್ದೇವೆಂದು ಘಂಟಾಘೋಷವಾಗಿ ಹೇಳುವುದು, ಎದೆಯುಬ್ಬಿಸಿ ತಿರುಗಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಇಂತಹ ಪ್ರತಿಕುಲ ವಾತಾವರಣದಲ್ಲಿ ಭಾವನೆಗಳನ್ನು ಕೆರಳಿಸುವಂತಹ ಶಕ್ತಿಗಳನ್ನು ಮಟ್ಟ ಹಾಕುವ ಅಗತ್ಯವಿದೆ. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗಳಾದ ನಾವು ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿಸಿ ರಕ್ಷಿಸಬೇಕಾಗಿದೆ.
ಸಂವಿಧಾನದ ಪೀಠಿಕೆಯಲ್ಲಿ ಹೇಳಿದಂತೆ ನಾವೆಲ್ಲರೂ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ದೃಢ ಸಂಕಲ್ಪ ಮಾಡಬೇಕಾಗಿದೆ. ಪ್ರತಿಯೊಬ್ಬ ಪ್ರಜೆಗೂ ವಿಚಾರವನ್ನು ಅಭಿವ್ಯಕ್ತಿ ಪಡಿಸುವ, ನಂಬಿಕೆ, ಧರ್ಮ ಹಾಗೂ ಉಪಾಸನೆ ಸ್ವಾತಂತ್ರ್ಯ, ಸಮಾನತೆ, ಬ್ರಾತತ್ವ ಭಾವನೆ ಮೂಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜೇಶ್ವರಿ ಹಿಪ್ಪರಗಿ, ಸಿ.ಬಿ. ಪಾಟೀಲ್, ಕೆ.ಎಸ್. ಅಂಕಲಗಿ, ಸಿದ್ದರು ರಾಯಣ್ಣವರ್, ಎಸ್.ವಿ. ಪಾಟೀಲ್, ವಿದ್ಯಾವತಿ ಅಂಕಲಗಿ, ನಸೀಮಾ ರೋಜಿನದಾರ್, ದಸ್ತಗಿರಿ ಸಾಲೋಟಗಿ, ಶ್ಯಾಮ್ಸರ್ ಮುಲ್ಲಾ, ರಜಾಕ್ ಕಾಖಂಡಿಕಿ, ಪಿಂಟು ಹೊಸಮನಿ, ಶೈಲಜಾ ಹೊಸಮನಿ, ರಮೇಶ್ ಕಾಳೆ, ಅಶೋಕ್ ಚೌಹಾಣ್, ಪ್ರೀತಿ ದಶವಂತ್ ಇತರರು ಇದ್ದರು.