ಕೇವಲ ಉಳ್ಳವರ ಸೇವೆ ಮಾಡುತ್ತಿರುವ ಬಂಡವಾಳಶಾಹಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳನ್ನು ತಿರಸ್ಕರಿಸಿ, ದುಡಿಯುವಜನರ ಪರವಾದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಿ, ಪಕ್ಷದ ಅಭ್ಯರ್ಥಿ ನಾಗಜ್ಯೋತಿ ಬಿ. ಎನ್. ಅವರನ್ನು ಗೆಲ್ಲಿಸಬೇಕು ಎಂದು ಎಸ್‌ಯುಸಿಐ ಪಕ್ಷದ ರಾಜ್ಯ ಸೆಕ್ರೆಟರಿಯಟ್ ಸದಸ್ಯ ಕಾ. ಟಿ. ಎಸ್. ಸುನೀತ್‌ಕುಮಾರ ಹೇಳಿದರು.
ವಿಜಯಪುರ ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ನಾಗಜ್ಯೋತಿ ಬಿ.ಎನ್. ಅವರ ಚುನಾವಣಾ ಪ್ರಚಾರಕ್ಕಾಗಿ ಇಡೀ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ‘ಜೀಪ್ ಜಾಥಾʼಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾತಂತ್ರ್ಯಾನಂತರ ಆಳ್ವಿಕೆ ನಡೆಸಿದ ಎಲ್ಲಾ ಪಕ್ಷಗಳು ಕೇವಲ ಬಂಡವಾಳಿಗರ ಸೇವೆ ಮಾಡಿವೆ ಹಾಗೂ ಜನತೆಯನ್ನು ಜಾತಿ-ಧರ್ಮದ ಆಧಾರದ ಮೇಲೆ ಒಡೆದು ಆಳ್ವಿಕೆ ನಡೆಸಿವೆ. ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ನೀತಿಗಳನ್ನು ಜಾರಿಗೊಳಿಸಿದ ಕಾಂಗ್ರೆಸ್ ಸರ್ಕಾರ ಜನತೆಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಡಿತಗೊಳಿಸಿತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅದೇ ಯೋಜನೆಗಳನ್ನು ವೇಗವಾಗಿ ಇನ್ನಷ್ಟು ಕಠಿಣವಾಗಿ ಜಾರಿಗೊಳಿಸುತ್ತಾ ಜನರನ್ನು ಬೀದಿಪಾಲಾಗಿಸಿದೆ. ಆದ್ದರಿಂದ ದುಡಿಯುವ ಜನರ, ರೈತ-ಕಾರ್ಮಿಕರ ಹಿತವನ್ನು ಕಾಪಾಡಲು ಅವರ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲು ನಮ್ಮ ಅಭ್ಯರ್ಥಿ ನಾಗಜ್ಯೋತಿ ಬಿ.ಎನ್. ರವರನ್ನು ಗೆಲ್ಲಿಸಿ ಎಂದು ಹೇಳಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾ.ಬಿ. ಭಗವಾನ್ ರೆಡ್ಡಿ ಮಾತನಾಡಿ, ಅದಾನಿ ಅಂಬಾನಿಗಳ ಹಿತಕ್ಕಾಗಿ ರೈತರ ಹಿತವನ್ನು ಬಲಿ ಕೊಡುತ್ತಿರುವ ಮೋದಿ ಸರ್ಕಾರ ಎಲ್ಲ ಪ್ರಜಾತಾಂತ್ರಿಕ ಹಕ್ಕುಗಳನ್ನು ಗಾಳಿಗೆ ತೂರಿ ಫ್ಯಾಸಿವಾದಿ ಧೋರಣೆಯನ್ನು ಅನುಸರಿಸುತ್ತಿದೆ. ಚುನಾವಣಾ ಬಾಂಡ್‌ಗಳ ಹೆಸರಲ್ಲಿ ಭ್ರಷ್ಟಾಚಾರವನ್ನು ಅಧಿಕೃತಗೊಳಿಸಿರುವ ಮೋದಿ ಸರ್ಕಾರ ಧರ್ಮದ ಹೆಸರಲ್ಲಿ ಜನರನ್ನು ಹಾದಿ ತಪ್ಪಿಸುತ್ತಿದೆ. ಈಗಾಗಲೇ ಜನರಿಂದ ತಿರಸ್ಕರಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಸಹ ಹಿಂದೆ ಅದೇ ನೀತಿಗಳನ್ನು ಅನುಸರಿಸಿದೆ. ಆದ್ದರಿಂದ ಜನತೆ ತಮ್ಮ ನೈಜ ಜನಪ್ರತಿನಿಧಿಯನ್ನು ಕ್ರಾಂತಿಕಾರಿ ಕಮ್ಯುನಿಸ್ಟ್ ಪಕ್ಷವಾದ ಎಸ್‌ಯುಸಿಐ(ಸಿ) ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಕಂಡುಕೊಳ್ಳಬೇಕು ಎಂದು ಹೇಳಿದರು.
ನಂತರ ಜಿಲ್ಲೆಯ ಪ್ರಮುಖ ಗ್ರಾಮಗಳಾದ ಸಾರವಾಡ, ಬಬಲೇಶ್ವರ, ಕೋಟ್ಯಾಳ, ತಿಕೋಟಾ, ಹೊನವಾಡ, ಬಿಜ್ಜರಗಿ, ಬಾಬಾನಗರ, ಕನಮಡಿ, ಸೋಮದೇವರ ಹಟ್ಟಿಗಳಲ್ಲಿ ಪಕ್ಷದ ಅಭ್ಯರ್ಥಿ ನಾಗಜ್ಯೋತಿ ಬಿ.ಎನ್ ಅವರನ್ನು ಗೆಲ್ಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಾಥಾದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಎಚ್.ಟಿ, ಸಿದ್ಧಲಿಂಗ ಬಾಗೇವಾಡಿ, ಎಚ್.ಟಿ. ಭರತಕುಮಾರ್, ಕಾರ್ಯಕರ್ತರಾದ ಲಲಿತಾ ಬಿಜ್ಜರಗಿ, ಶಿವಭಾಳಮ್ಮ ಕೊಂಡಗೂಳಿ, ಸುರೇಖಾ ಕಡಪಟ್ಟಿ, ಕಾವೇರಿ ರಜಪೂತ ಸೇರಿದಂತೆ ಪಕ್ಷದ ಸದಸ್ಯರು, ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಿದ್ದರು.
