ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಇಂದು ಬೆಳಗ್ಗೆ ಪುರಸಭೆ ಅಧಿಕಾರಿಗಳು ಫುಟ್ಬಾತ್ ಮೇಲಿನ ಅನಧಿಕೃತ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಚರಣೆ ನಡೆಸಿದ್ದಾರೆ.
ಪುರಸಭೆ ಮುಖ್ಯ ಅಧಿಕಾರಿ ರುದ್ರೇಶ್ ಛತ್ತರಗಿ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ತದ ಬಸ್ ನಿಲ್ದಾಣದ ಮುಂಭಾಗ, ಮುದ್ದೇಬಿಹಾಳ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಪಿ ಐ ಗುರುಶಾಂತ್ ದಾಶಾಲ್ ಪೊಲೀಸ್ ಭದ್ರತೆ ಒದಗಿಸಿದ್ದರು. ಇನ್ನು ಇದೇ ಸಂದರ್ಭದಲ್ಲಿ ಅನಧಿಕೃತ ಅಂಗಡಿಗಳನ್ನು ವಶಕ್ಕೆ ಪಡೆಯಲಾಯಿತು.
ಈ ವೇಳೆ ರುದ್ರೇಶ್ ಛತ್ತರಗಿ ಮಾತನಾಡಿ, “ಪುರಸಭೆಯಿಂದ 2-3 ಬಾರಿ ಫುಟ್ಪಾತ್ ತೆರವು ಕಾರ್ಯಾಚರಣೆ ಮಾಡಲಾಗಿತ್ತು. ಮತ್ತೆ ಕೆಲವರು ಇಲ್ಲೇ ಅಂಗಡಿ ಹಾಕಿದ್ದರು. ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಮೇಘ ಮಾರುಕಟ್ಟೆ ಪಕ್ಕದಲ್ಲಿ ಅಂಗಡಿ ಹಾಕಲು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಫುಟ್ಪಾತ್ ಮೇಲೆ ಅಂಗಡಿ ಹಾಕಿದರೆ ಅಂತವರ ಅಂಗಡಿ ಸೀಜ್ ಮಾಡಿ ಕ್ರಮ ಕೈಗೊಳ್ಳಲಾಗುವುದು” ಎಂದರು.
ತೆರವು ವಿರೋಧಿಸಿ ಪ್ರತಿಭಟನೆ:
ಬೆಳ್ಳಂ ಬೆಳಗ್ಗೆ ನಡೆದ ತೆರವು ಕಾರ್ಯಚರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ದಸಂಸ ಮುಖಂಡ ಅಶೋಕ ಚಲವಾದಿ, “ಪಟ್ಟಣದಲ್ಲಿ ಕೆಲ ಗಣ್ಯ ವರ್ತಕರು ಸೇಫ್ಟಿ ಮಾಡಿಕೊಂಡಿದ್ದಾರೆ. ಪುರಸಭೆ ಮುಖ್ಯ ಅಧಿಕಾರಿಗಳು ಅವರನ್ನೆಲ್ಲ ಬಿಟ್ಟು ಬಡ ವ್ಯಾಪಾರಸ್ಥರ ಮೇಲೆ ದೌರ್ಜನ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮುಖ್ಯ ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ತಹಶೀಲ್ದಾರರ ಕಚೇರಿ ಮುಂಭಾಗದಲ್ಲಿ ಆಹೋರಾತ್ರಿ ಧರಣಿ ನಡೆಸಲಾಗುವುದು” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ: ವಿಜಯ್ ಕುಮಾರ್
ಪ್ರತಿಭಟನೆಯಲ್ಲಿ ಪರಶುರಾಮ ದಿಂಡಿವಾರ, ಗುರು ಗುಡಿಮನಿ, ಮಹಾಂತೇಶ ಚಕ್ರವರ್ತಿ, ಗಂಗಾಧರ ಆರ್ಯರ, ಮಹೇಶ ಕೊಡಗಾನೂರ, ಯಮನೂರಿ ಚಲವಾದಿ, ಸಂತೋಷ ದಳಪತಿ, ಚಂದ್ರಶೇಖರ ನಾಲತವಾಡ, ಪ್ರಶಾಂತ ಭೂತನಾಳ, ಮುತ್ತು ಬೀದರಿ, ರವಿ ಮ್ಯಾಗೇರಿ, ಚಿದಾನಂದ ಪರನಾಕರ, ಸಂಜೆಯ ಬಿಸನಾಳ, ಲಕ್ಷ್ಮಣ ಹಲ್ಯಾಳ ಹಾಗೂ ಸಂಗಪ್ಪ ಛಲವಾದಿ ಇದ್ದರು.