ವಿಜಯಪುರದ ಖ್ಯಾತ ನೇತ್ರ ತಜ್ಞರು ಹಾಗೂ ಜಮಾಅತೆ ಇಸ್ಲಾಮಿ ಹಿಂದ್‌ನ ಹಿರಿಯ ನಾಯಕರೂ ಆಗಿದ್ದ ಡಾ. ಎಂ ಜೆ ಇನಾಮ್‌ದಾರ್ ನಿಧನರಾಗಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿಯ ಸದಸ್ಯರಾಗಿ, ಶಾಂತಿ ಪ್ರಕಾಶನದ ಟ್ರಸ್ಟಿಯಾಗಿ ಮತ್ತು ಸನ್ಮಾರ್ಗ ಪತ್ರಿಕೆಯ ಆರಂಭಕಾಲದ ಓದುಗರು, ಬರಹಗಾರರೂ ಆಗಿ ಚಿರಪರಿಚಿತರಾಗಿದ್ದ ಇನಾಮ್‌ದಾರ್(79) ಅವರು ಕವಿಯೂ ಸಾಹಿತಿಯೂ ಆಗಿದ್ದರು.
ʼಆಹಾರ, ಅಹಿಂಸೆ, ಧರ್ಮʼ ಎಂಬ ಅವರ ಕೃತಿ ಭಾರೀ ಸಂಖ್ಯೆಯ ಓದುಗರನ್ನು ಆಕರ್ಷಿಸಿತ್ತು. ʼನ್ಯಾಯದ ವ್ಯವಸ್ಥೆʼ ಎಂಬ ಅವರ ಕೃತಿಯೂ ಜನಪ್ರಿಯವಾಗಿತ್ತು. ಈ ಎರಡೂ ಕೃತಿಗಳನ್ನು ಶಾಂತಿ ಪ್ರಕಾಶನ ಪ್ರಕಟಿಸಿತ್ತು. ಸನ್ಮಾರ್ಗ ಪತ್ರಿಕೆಗೆ ಬಿಜಾಪುರ ಜಿಲ್ಲೆಯಲ್ಲಿ ದೊಡ್ಡಮಟ್ಟದ ಓದುಗರನ್ನು ಒದಗಿಸಿಕೊಟ್ಟಿದ್ದ ಅವರು ತನ್ನ ಗಝಲ್ ಮೂಲಕ ಜನಪ್ರೀತಿ ಗಳಿಸಿಕೊಂಡಿದ್ದರು. ಮುಖ್ಯವಾಗಿ ಲಿಂಗಾಯತ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ನಡುವಿನ ಸೌಹಾರ್ದದ ಕೊಂಡಿಯಾಗಿ ಅವರು ಪಾತ್ರ ನಿಭಾಯಿಸುತ್ತಿದ್ದರು. ಒಳ್ಳೆಯ ಭಾಷಣಗಾರರೂ ಆಗಿದ್ದ ಅವರಿಗೆ ನಾಡಿನಾದ್ಯಂತ ದೊಡ್ಡ ಮಟ್ಟದ ಓದುಗರು ಮತ್ತು ಅನುಯಾಯಿಗಳೂ ಇದ್ದಾರೆ.
ಎಂ ಜೆ ಇನಾಮ್‌ದಾರ್ ಅವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ. ಬೆಳಗಾಮಿ ಮುಹಮ್ಮದ್ ಸಾದ್, ಕಾರ್ಯದರ್ಶಿ ಯೂಸುಫ್ ಕನ್ನಿ, ಅಕ್ಬರ್ ಅಲಿ ಉಡುಪಿ, ಮುಹಮ್ಮದ್ ಕುಂಞಿ, ಮಾಜಿ ರಾಜ್ಯಾಧ್ಯಕ್ಷ ಅಥರುಲ್ಲಾ ಶರೀಫ್ ಸಹಿತ ಬಹುತೇಕ ಮುಖಂಡರು ಸಂತಾಪ ಸೂಚಿಸಿದ್ದು, ಅವರ ಅನುಪಸ್ಥಿತಿಯನ್ನು ತಾಳಿಕೊಳ್ಳುವ ಶಕ್ತಿಯನ್ನು ಅಲ್ಲಾಹನು ಕುಟುಂಬಿಕರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಿಕ್ಷಣ ಸುಧಾರಣೆಗೆ ವಿಷಯವಾರು ಶಿಕ್ಷಕರ ನೇಮಕಕ್ಕೆ ಪ್ರತಿಭಟನೆ
ಡಾ. ಇನಾಮ್‌ದಾರ್ ಅವರು ಪತ್ನಿ, ಆರು ಹೆಣ್ಣುಮಕ್ಕಳು ಮತ್ತು ಓರ್ವ ಮಗನನ್ನು ಅಗಲಿದ್ದಾರೆ. ಅಲ್ಲಾಹನು ಅವರಿಗೆ ಮಗ್ ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲೆಂದು ಪ್ರಾರ್ಥಿಸಿದ್ದಾರೆ.